ಬಜ್ಪೆ: ಮೆಸ್ಕಾಂ ಇಲಾಖೆಯಲ್ಲಿ ಹಗಲಿರುಳೆನ್ನದೆ, ಮಳೆ-ಗಾಳಿ, ಬಿಸಿಲು-ಚಳಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ನಿರ್ವಹಿಸುತ್ತಿರುವ ಮೆಸ್ಕಾಂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಬಜ್ಪೆಯ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ ವತಿಯಿಂದ ವಾರ್ಷಿಕ ಮಹಾಸಭೆಯಲ್ಲಿ ಗೌರವ ಸನ್ಮಾನ ನೆರವೇರಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಪ್ರಸ್ತುತ ಬಜ್ಪೆ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಮ್ಯಾನ್, ಕಿರಿಯ ಇಂಜಿನಿಯರ್, ಸಿಬ್ಬಂದಿ ವರ್ಗದವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಜ್ಪೆ ಮೆಸ್ಕಾಂನ ಕಿರಿಯ ಇಂಜಿನಿಯರ್ ದಿನೇಶ್ ಡಿ ಆರ್, ಸುಮನಾ ಎಂ ಬಿ, ಮಹಮ್ಮದ್ ಹುಸೇನ್ ಪಿಂಜಾರ ಅವರು, ಪರಿವರ್ತನಾ ಸೊಸೈಟಿ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸ್ಲಾಘನೀಯ ಮತ್ತು ನಾವು ಎಂದಿಗೂ ಮರೆಯಲಾಗದ ಅನುಭವ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಮಾತನಾಡಿ, ಪರಿಶ್ರಮದಿಂದ ಪರಿವರ್ತನೆ ಸಾಧ್ಯ. ಇದಕ್ಕೆ ಉದಾಹರಣೆ ಪರಿವತ೯ನಾ ಕೋ ಆಪರೇಟಿವ್ ಸೊಸೈಟಿ. ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ, ಸಂಸ್ಥೆಯ ಸೇವೆ, ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ, ಮೆಸ್ಕಾಂ ಸಿಬ್ಬಂದಿಗಳನ್ನು ಯಾರು ಗುರುತಿಸಿದ ಸಂದರ್ಭದಲ್ಲಿ ಅವರನ್ನು ಗೌರವಿಸಿದ್ದು ಅತ್ಯಂತ ಸಂತೋಷದಾಯಕ ಎಂದರು.
ಪರಿವರ್ತನಾ ಸೊಸೈಟಿ ಅಧ್ಯಕ್ಷರಾದ ಕೃಷ್ಣಾನಂದ ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವೈಶಾಲಿ, ನಿರ್ದೇಶಕರುಗಳಾದ ಜಯಲಕ್ಷ್ಮಿ, ರುಕ್ಕಯ್ಯ ಅಮೀನ್, ಆಲ್ವಿನ್ ಎಫ್ ಡಿಸೋಜ, ರಾಘವೇಂದ್ರ, ಕಮಲಾಕ್ಷ ಡಿ, ಪದ್ಮನಾಭ ಅಮೀನ್, ಯಮುನಾ, ನಂದಾಕ್ಷಿ, ಹರೀಶ್ ಎಂ.ಸಿ, ಎಂ.ಕೆ ಅಶ್ರಫ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾವಣ್ಯ ಉಪಸ್ಥಿತರಿದ್ದರು.










