ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ
ಗುವಾಹಟಿ: ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಈ ವಿಷಯದಲ್ಲಿ ಪೆಟ್ರೋಲ್‌ನೊಂದಿಗೆ ಶೇ.20ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಸಂಬಂಧ ನೀತಿ ಆಯೋಗದ ಅಧೀನದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಅಸ್ಸಾಂನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, 2026ರೊಳಗೆ ಶೇ.20ರಷ್ಟು ಎಥೆನಾಲ್ ಮಿಶ್ರಣದ ಗುರಿ ನಿಗದಿಯಾಗಿತ್ತು. ಈಗಾಗಲೇ ಶೇ.19.6ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ತಿಂಗಳು ನಿಗದಿತ ಗುರಿ ಪೂರ್ಣಗೊಳ್ಳಲಿದೆ. ಹೀಗಾಗಿ ಈಗ ನಮ್ಮ ಗುರಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಡೆಗಿದೆ. ಪೆಟ್ರೋಲ್ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವುದರ ಬಗ್ಗೆ ನಾವು ಕಾರ್ಯತತ್ಪರವಾಗಿದ್ದೇವೆ. ಈ ನಿಟ್ಟಿನಲ್ಲಿ ಸಮಿತಿ ಗಮನ ಹರಿಸಲಿದೆ ಎಂದು ಹೇಳಿದರು.
ದೇಶದ ಎಥೆನಾಲ್ ಮಿಶ್ರಣ ಸಾಮರ್ಥ್ಯ 1,700 ಕೋಟಿ ಲೀಟರ್ ಆಗಿದೆ. ಈ ಪೈಕಿ ಈಗಾಗಲೇ ಪೆಟ್ರೋಲ್‌ನೊಂದಿಗೆ 1,500 ಕೋಟಿ ಲೀಟರ್ ಮಿಶ್ರಣ ಮಾಡಲಾಗುತ್ತಿದೆ. ಭಾರತ ವಾರ್ಷಿಕವಾಗಿ ವಿದೇಶಗಳಿಂದ ತೈಲ ಆಮದಿಗೆ 13 ಲಕ್ಷ ಕೋಟಿ ರೂ. ವ್ಯಯಿಸುತ್ತದೆ. ಕಚ್ಚಾತೈಲ ಆಮದು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯತ್ತ ದೃಷ್ಟಿ ನೆಟ್ಟಿದೆ ಎಂದರು. ಪ್ರಸ್ತುತ ಹಸಿರು ಹೈಡ್ರೋಜನ್ ಬೆಲೆಯು ಕೆಜಿಗೆ 390 ರೂ. ಇದೆ. ಒಂದೊಮ್ಮೆ ಈ ದರ ಅರ್ಧದಷ್ಟು ತಗ್ಗಿದರೆ ಇಂಧನ ವಲಯದಲ್ಲಿ ಹೊಸ ಕ್ರಾಂತಿಯಾಗಲಿದೆ. ಸಾಂಪ್ರದಾಯಿಕ ಇಂಧನ ಬಳಕೆಯ ಬದಲು ನಾವು ಹಸಿರು ಹೈಡ್ರೋಜನ್ ಬಳಕೆಯತ್ತ ಗಮನ ಹರಿಸಿದ್ದೇವೆ. ವಿಶ್ವದ ಪ್ರತಿ ದೇಶವೂ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸುತ್ತಿದೆ. ಇಂಧನ ವಲಯದಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ಆರ್ಥಿಕತೆ ಬೆಳವಣಿಗೆ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com