ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಿಭಿನ್ನ ಚಿಂತನೆ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮ
ಮಂಗಳೂರು: ಸಹಕಾರಿ ವಲಯದಲ್ಲಿ ವಿಭಿನ್ನವಾದ ಚಿಂತನೆ, ವೈಶಿಷ್ಟ್ಯಪೂರ್ಣ ಕಾರ್ಯ್ರಕ್ರಮಗಳೊಂದಿಗೆ ಮುನ್ನಡೆಯುತ್ತಿರುವ ಮಂಗಳೂರಿನ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಆರಂಭದ ಐದು ವರ್ಷಗಳನ್ನು ಅರ್ಥಪೂರ್ಣವಾಗಿ ಪೂರೈಸುತ್ತಿದ್ದು 10 ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.
ಸಹಕಾರಿ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸುತ್ತಿರುವ ಮತ್ತು ಸಮಾಜ ಮುಖಿ ಕಾರ್ಯಗಳ ಮೂಲಕ ಮಾದರಿಯಂತಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಆರಂಭಗೊಂಡು ಕೇವಲ ಐದು ವರ್ಷಗಳಲ್ಲಿ ಐದು ಸಂಪೂರ್ಣ ಗಣಕೀಕೃತ ಮತ್ತು ಸುಸಜ್ಜಿತ ಶಾಖೆಗಳನ್ನ ಹೊಂದಿ ನಗುಮುಖದ ಸೇವೆಯನ್ನು ನೀಡುತ್ತಾ, ದಾಖಲೆಯ ವ್ಯವಹಾರ ನಡೆಸಿ, ದಾಖಲೆಯ ಲಾಭ ಗಳಿಸಿ ಉತ್ತಮ ಡಿವಿಡೆಂಟ್ ಅನ್ನು ತನ್ನ ಸದಸ್ಯರಿಗೆ ನೀಡುತ್ತಾ ಬಂದಿದೆ. ಶ್ರೀಶಾ ಸೊಸೈಟಿಗೆ ಈಗ ಐದು ವರ್ಷದ ಎಳೆಯ ಪ್ರಾಯ. ಸಾಮಾಜಿಕ ಬದ್ಧತೆ ಹಾಗೂ ಶಿಸ್ತುಬದ್ಧ ವೃತ್ತಿಪರತೆಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಶಾ ಸೊಸೈಟಿಯು ಆರಂಭದ ಐದು ವರ್ಷಗಳನ್ನು ಪೂರೈಸುತ್ತಿರುವ ಈ ಶುಭವಸರದಲ್ಲಿ ಹತ್ತು ವಿಶೇಷ ಸಮಾಜ ಸೇವಾ ಕಾರ್ಯಕ್ರಮಗಳನ್ನು ತನ್ನ ಹಿತೈಷಿಗಳ, ಸದಸ್ಯರ ಸಹಕಾರ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಇದರಲ್ಲಿ ಹೆಚ್ಚಿನವು ಮಂಗಳೂರು ತಾಲೂಕಿನ ವ್ಯಾಪ್ತಿಯೊಳಗೆ ಆಯೋಜಿಸಲಾಗುವುದು.
1. ಸರಕಾರಿ ಕನ್ನಡ ಮಾಧ್ಯಮದ ಅನೇಕ ಶಾಲೆಗಳಲ್ಲಿ [1 ರಿಂದ 10 ನೇ ತರಗತಿ] ಮೂಲಸೌಕರ್ಯ ಕೊರತೆ ಇರುವ ಕಾರಣ ಅದು ಅಲ್ಲಿನ ಮಕ್ಕಳ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವುದು ಸಹಜ. ಈ ನೆಲೆಯಲ್ಲಿ ಆ ಶಾಲೆಗಳಲ್ಲಿ ಓದುತ್ತಿರುವ 5000 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸೆ ಶಿಬಿರಗಳನ್ನು ಶಾಲೆಗಳಲ್ಲೇ ಆಯೋಜನೆ ಮಾಡಲಾಗುತ್ತದೆ.
2. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂ. ಅಪಘಾತ ವಿಮೆಯನ್ನು [ಪ್ರದಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ] ನೀಡಲಾಗುವುದು. ಇದರ ಪ್ರೀಮಿಯಂ ಅನ್ನು ಸೊಸೈಟಿಯೇ ಭರಿಸಲಿದೆ.
3. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಬೆಳೆಸುವ, ಉತ್ತೇಜಿಸುವ ನಿಟ್ಟಿನಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಗಳಿಗೆ ಒಟ್ಟು 5000 ಪುಸ್ತಕಗಳನ್ನು ನೀಡಲಾಗುತ್ತದೆ.
4. ಆರೋಗ್ಯದ ದೃಷ್ಟಿಯಿಂದ ಆಯ್ದ 50 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 50 ವಾಟರ್ ಫಿಲ್ಟರ್ಗಳನ್ನು ನೀಡಲು ನಿರ್ಧರಿಸಲಾಗಿದೆ.
5. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಐದು ವಿದ್ಯಾರ್ಥಿಗಳನ್ನು ಶ್ರೀಶಾ ಸೊಸೈಟಿಯು ದತ್ತು ಪಡೆಯಲಿದೆ.
6. ನಮ್ಮ ದೇಶಕ್ಕೆ ಸಂವಿಧಾನ ದೊರೆತು 50 ವರ್ಷಗಳಾಗುತ್ತಿರುವ ಶುಭವಸರದಲ್ಲಿ 25 ಕಾಲೇಜುಗಳಲ್ಲಿ ಭಾರತ ಸಂವಿಧಾನದ ಬಗ್ಗೆ ಉಪನ್ಯಾಸ -ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ.
7. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ 50 ವಿವಿಧ ಸ್ಥಳಗಳಲ್ಲಿ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
8. ಸಮಾಜದ ಕಡುಬಡವರಿಗೂ ಆರೋಗ್ಯ ದೊರೆಯಲಿ ಎಂಬ ಕಾರಣದಿಂದ ತಿಂಗಳಿಗೊಂದರಂತೆ ಬೃಹತ್ ಉಚಿತ ಆರೋಗ್ಯ -ದಂತ -ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸುವುದು. ಈ ಶಿಬಿರಗಳಲ್ಲಿ ಪಾಲ್ಗೊಂಡವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಕಾರದೊಂದಿಗೆ ಮಾಡಲಾಗುತ್ತದೆ ಮತ್ತು ಕನ್ನಡಕಗಳ ಅವಶ್ಯಕತೆ ಉಳ್ಳವರಿಗೆ ಉಚಿತವಾಗಿ ಸೊಸೈಟಿಯ ವತಿಯಿಂದ ನೀಡಲಾಗುತ್ತದೆ.
9. ತಿಂಗಳಿಗೊಂದರಂತೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ.
10. ತಿಂಗಳಿಗೆ ಒಮ್ಮೆ ಸಾಹಿತ್ಯ -ಸಂಗೀತ ಕಾರ್ಯಕ್ರಮಗಳನ್ನು ಆಸಕ್ತರಿಗಾಗಿ ಆಯೋಜಿಸಲಾಗುತ್ತದೆ.
ಈ ಮೇಲೆ ಕಾಣಿಸಿದ ಎಲ್ಲಾ ಹತ್ತು ಕಾರ್ಯಕ್ರಮಗಳನ್ನು ಒಂದು ವರ್ಷದ ಅವಧಿಯೊಳಗೆ ಆಯೋಜಿಸಲು ನಿರ್ಧರಿಸಲಾಗಿದೆ. ಶ್ರೀಶಾ ಸೊಸೈಟಿಯು ತಾನು ಗಳಿಸಿದ ಲಾಭದ ಒಂದಂಶವನ್ನು “ಕೆರೆಯ ನೀರನು ಕೆರೆಗೆ ಚೆಲ್ಲು” ಎಂಬ ಮಾತಿನಂತೆ ಮರಳಿ ಸಮಾಜಕ್ಕೇ ಈ ಸಮಾಜಮುಖಿ ಕಾರ್ಯಗಳ ಮೂಲಕ ನೀಡುತ್ತಿದೆ. ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಈ ಎಲ್ಲಾ ಸತ್ಕಾರ್ಯಗಳ ಸಾಧನೆಗೆ,ಯಶಸ್ಸಿಗೆ ಬದ್ಧತೆ ಹಾಗೂ ದಣಿವರಿಯದ ಸೇವಾ – ಅರ್ಪಣಾ ಭಾವವಿರುವ ಸೊಸೈಟಿಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳು ಹಾಗೂ ಸದಸ್ಯರೇ ಕಾರಣ ಎಂದು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com