ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್ ರಮೇಶ್ ಅಭಿಪ್ರಾಯ
ಮಂಗಳೂರು: ಸಹಕಾರ ಸಂಘಗಳು ಪ್ರತಿ ತಿಂಗಳ ಜಮಾ -ಖರ್ಚುಗಳನ್ನು ಜಿಲ್ಲಾ ಕಚೇರಿಗೆ ತಲುಪಿಸಬೇಕು. ಕಾಲಕಾಲಕ್ಕೆ ಲೆಕ್ಕಪತ್ರ ನಿರ್ವಹಣೆ ಮಾಡಬೇಕು. ಸಾಲ ನೀಡುವಾಗ ಕರಾರುವಕ್ಕಾದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಕ್ರಮಬದ್ಧವಾಗಿ ಪರಿಶೀಲಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್ ರಮೇಶ್ ಕಿವಿಮಾತು ಹೇಳಿದರು.
ಮಂಗಳೂರಿನ ಜನತಾ ಬಜಾರ್‌ನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಕಛೇರಿ ಉದ್ಘಾಟನೆ ಹಾಗೂ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಹಕಾರಿ ಸಂಘವಾಗಿರಲಿ, ಜಮೆ ಮತ್ತು ಖರ್ಚುಗಳ ಬಗ್ಗೆ ಹಾಗೂ ಬಾಕಿ ಹಣದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ದೃಢೀಕರಿಸಿಕೊಳ್ಳಬೇಕು. ಯಾವುದೇ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ, ಕ್ರಮಬದ್ಧವಾಗಿ ಮಾಡಿದರೆ, ಮುಂದೆ ವ್ಯಾಜ್ಯಗಳು ಬರದಂತೆ ತಡೆಯಬಹುದು ಎಂದು ಹೇಳಿದರು.
ಕೇಂದ್ರ ಸಹಕಾರ ಸಚಿವಾಲಯವು ಏಕರೂಪ ತಂತ್ರಾಂಶ ಅಳವಡಿಸುವ ಮೂಲಕ ಎಲ್ಲ ರೀತಿಯ ಸಹಕಾರ ಸಂಘಗಳು ಒಂದೇ ಸೂತ್ರದಡಿ ತರುವ ಯೋಜನೆ ರೂಪಿಸುತ್ತಿದೆ. ಇದರಿಂದ ಯಾವುದೇ ವ್ಯವಹಾರ ನಡೆದರೂ ಅದು ಏಕರೂಪ ತಂತ್ರಾಂಶದ ಮೂಲಕ ಸರಕಾರದ ಮಾಹಿತಿಗೆ ಸಿಗುತ್ತದೆ ಎಂದು ಹೆಚ್.ಎನ್ ರಮೇಶ್ ತಿಳಿಸಿದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್ ಎಸ್.ಕೆ ಮುಖ್ಯ ಅತಿಥಿಯಾಗಿ ಮಾತನಾಡಿ, ಸಹಕಾರಿ ಸಂಘಗಳು ಪ್ರಾದೇಶಿಕವಾಗಿ, ದೇಶಕ್ಕಾಗಿ, ಸಮಾಜಕ್ಕಾಗಿ ಏನು ಕೊಡುಗೆ ನೀಡಿವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. 100 ಸಂಸ್ಥೆಗಳು 100 ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವ ಪಣ ತೊಡಬೇಕು. ಗ್ರಾಮದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ಮಳೆ ಕೊಯ್ಲು ಅಭಿಯಾನದಂ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುವಂತಾಗಬೇಕು. ಸಾಮಾಜಿಕ ನಾಯಕತ್ವದ ಪರಿಕಲ್ಪನೆ ಇಟ್ಟುಕೊಂಡು ಮುನ್ನಡೆಯುವ ಕೆಲಸವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಜನತಾ ಬಜಾರ್‌ನ ಅಧ್ಯಕ್ಷ ಪುರುಷೋತ್ತಮ ಭಟ್ ಮಾತನಾಡಿ, ಸಹಕಾರಿ ಸಂಸ್ಥೆಗಳು ಸುಸ್ಥಿತಿಯಲ್ಲಿ ಕೆಲಸ ಮಾಡಲು ಒಳ್ಳೆಯ ಸಾಲಗಾರನೂ ಬೇಕು. ನಾವು ಬಳಸುವ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು. ವಿವೇಚನೆಯಿಂದ ಬಳಸಬೇಕು. ಹೀಗಾದರೆ ಆದರ್ಶ ಸಹಕಾರಿ ಬೆಳೆಯಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣು ಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಸಹಕಾರಿಗಳು ಉತ್ಕೃಷ್ಟವಾಗಿ ಬೆಳೆಯಬೇಕು. ಒಗ್ಗೂಡಿ ಕೆಲಸ ಮಾಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ, ಉಪಾಧ್ಯಕ್ಷ ಸಂಜೀವ ಅಡ್ಯಾರ್, ನಿಕಟಪೂರ್ವ ಅಧ್ಯಕ್ಷ ಎ.ಸುರೇಶ್ ರೈ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ವಲಯ ಅಧಿಕಾರಿ ಗುರುಪ್ರಸಾದ್ ಬಂಗೇರ ಸ್ವಾಗತಿಸಿದರು. ಸಂಯುಕ್ತ ಸಹಕಾರಿಯ ದ.ಕ. ಜಿಲ್ಲಾ ಅಧಿಕಾರಿ ವಿಜಯ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com