ಸಹಕಾರಿ ಸಂಘಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ
ಮುಂಬೈ: ಸಮಾಜದಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರಿ ಚಳುವಳಿಯು ನ್ಯಾಯ, ಏಕತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳನ್ನು ಮುನ್ನೆಲೆಗೆ ತಂದು ಕಾರ್ಯ ನಿರ್ವಹಿಸುವುದರ ಜೊತೆಗೆ ವಿವಿಧ ವರ್ಗಗಳ ಜನರನ್ನು ಸೈದ್ಧಾಂತಿಕವಾಗಿ ಒಗ್ಗೂಡಿಸಿ ಸಾಮಾಜಿಕವಾಗಿ ಏಕತೆ ಮೂಡಿಸುವಲ್ಲಿ ಸಹಕರಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಮಹಾರಾಷ್ಟ್ರದ ಕೊಲ್ಹಾಪುರದ ವಾರನನಗರ ಶ್ರೀ ವಾರನ ಮಹಿಳಾ ಕೋ ಆಪರೇಟಿವ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ ಬಹಳ ಪ್ರಮುಖವಾದುದು. ವೃತ್ತಿಪರ ನಿರ್ವಹಣಾ ಅಭ್ಯಾಸಗಳನ್ನು ಸಹಕಾರಿ ಕ್ಷೇತ್ರ ರೂಢಿಸಿಕೊಳ್ಳಬೇಕು. ದೇಶ -ವಿದೇಶಗಳಲ್ಲಿ ಮನೆಮಾತಾಗಿರುವ ಅಮುಲ್, ಲಿಜ್ಜತ್ ಹಪ್ಪಳದಂಥ ಸಹಕಾರಿಗಳ ಯಶಸ್ಸು ಭಾರತದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರವನ್ನು ವಿಶದೀಕರಿಸಿವೆ. ವಿಶೇಷವಾಗಿ ಹೈನುಗಾರಿಕಾ ವಲಯದಲ್ಲಿ ಸಹಕಾರ ವಲಯದಿಂದ ಮಹತ್ವದ ಸಾಧನೆ ದಾಖಲಾಗಿದೆ. ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವೆನಿಸಿದ್ದರಲ್ಲಿ ಸಹಕಾರಿಗಳ ಪಾಲು ಪ್ರಮುಖವಾಗಿದೆ. ಹೈನುಗಾರಿಕೆಯಲ್ಲದೆ, ರಸಗೊಬ್ಬರ, ಹತ್ತಿ, ಕೈಮಗ್ಗಗಳು, ವಸತಿ, ಖಾದ್ಯ ತೈಲಗಳು, ಸಕ್ಕರೆ ಇತ್ಯಾದಿ ಕ್ಷೇತ್ರಗಳಲ್ಲೂ ಸಹಕಾರಿ ಕ್ಷೇತ್ರದ ಪಾತ್ರ ಮರೆಯುವಂತಿಲ್ಲ ಎಂದು ದ್ರೌಪದಿ ಮುರ್ಮು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು
ಸಹಕಾರಿ ಕ್ಷೇತ್ರದಿಂದ ಮಹಿಳಾ ಸಬಲೀಕರಣವೂ ಸಾಧ್ಯವಾಗಿದೆ ಎಂದು ಒತ್ತಿ ಹೇಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸುವರ್ಣ ಮಹೋತ್ಸವ ಆಚರಿಸುತ್ತಿರುವ ವಾರನ ಮಹಿಳಾ ಸಹಕಾರಿಯು, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಮಹಿಳೆಯರು ಹೇಗೆ ಸ್ವಾವಲಂಬಿಗಳಾಗಬಹುದು ಮತ್ತು ಸಾಮೂಹಿಕ ಪ್ರಗತಿ ಹೇಗೆ ಸಾಧ್ಯವಾಗಬಹುದು ಎಂದು ಈ ಸಹಕಾರಿ ತೋರಿಸಿದೆ ಎಂದು ಬೊಟ್ಟು ಮಾಡಿದರು. ಈ ರೀತಿಯ ಸಹಕಾರಿಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಓರಿಸುವ ಜೊತೆಗೆ ಮಹಿಳೆಯರು ತಮ್ಮ ಕೌಶಲ್ಯಗಳನ್ನು ತೋರಿಸಿ, ನಾಯಕತ್ವದ ಗುಣಗಳ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಬಗ್ಗೆ ಕಲಿಯಬಹುದು ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ
ಬಡತನ ನಿರ್ಮೂಲನೆ, ಆಹಾರ ಭದ್ರತೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ವಿಷಯದಲ್ಲೂ ಸಹಕಾರಿ ಕ್ಷೇತ್ರ ಸಾಕಷ್ಟು ಕೊಡುಗೆ ನೀಡುತ್ತಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರಿಗಳು ಮತ್ತಷ್ಟು ಬದಲಾವಣೆಯತ್ತ ಹೊರಳಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ವಿಷಯದಲ್ಲಿ ಸಹಕಾರಿ ಸಂಸ್ಥೆಗಳು ಗಮನ ಹರಿಸಬೇಕು. ಹೀಗಾದರೆ ಸಹಕಾರಿ ಕ್ಷೇತ್ರ ಮತ್ತಷ್ಟು ವೇಗವಾಗಿ ಅಭಿವೃದ್ಧಿ ಹೊಂದಬಹುದು. ಸಹಕಾರಿಗಳು ವೈಯಕ್ತಿಕ ಲಾಭದ ಉದ್ದೇಶಕ್ಕಾಗಿ ಕೆಲಸ ಮಾಡಿದರೆ ಅದರ ಉದ್ದೇಶ ದಿಕ್ಕು ತಪ್ಪುತ್ತದೆ. ಆದ್ದರಿಂದ ಈ ವಿಷಯದಲ್ಲಿ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com