ಶ್ರೀ ಪೂರ್ಣಾನಂದ ಸಹಕಾರಿ ವಾರ್ಷಿಕ ಸಭೆಯಲ್ಲಿ ಗಣೇಶ್ ಶೆಣೈ ಅಭಿಪ್ರಾಯ
ಮಂಗಳೂರು: ನಾವಿಂದು ನೆಮ್ಮದಿಯ, ಸುರಕ್ಷಿತ ಜೀವನ ನಡೆಸಲು ಮೂಲ ಕಾರಣ ನಮ್ಮ ಭಾರತೀಯ ಸೇನಾಪಡೆಯ ಯೋಧರು. ಯೋಧರು ಅಹೋರಾತ್ರಿ ದೇಶದ ದುರ್ಗಮ ಗಡಿಗಳನ್ನು ಕಾಯುತ್ತಿರುವ ಕಾರಣ, ನಮಗೆ ನಿಶ್ಚಿಂತೆಯ ಬದುಕು ಸುಗಮ ಸಾಧ್ಯವಾಗಿದೆ. ಇದೇ ವೇಳೆ, ಬಲಿದಾನಿ ಯೋಧರ ಕುಟುಂಬಗಳ ಬದುಕು ನಿತ್ಯವೂ ಕ್ಷಣಕ್ಷಣವೂ ಆತಂಕದಿಂದ ಕೂಡಿರುವುದು ಕೂಡ ಅಷ್ಟೇ ಸತ್ಯ. ರಾಷ್ಟ್ರರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿ ಕೊಡುವ ಯೋಧರ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ, ಅವರ ನೆಮ್ಮದಿಯ ನಾಳೆಗಾಗಿ ಕಿಂಚಿತ್ತು ನೆರವಿನ ಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಗಣೇಶ್ ಶೆಣೈ ಹೇಳಿದರು.
ಮಂಗಳೂರು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಭಾನುವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ೨೨ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಲಾಭಾಂಶದಲ್ಲಿ ದೇಶದ ರಕ್ಷಣಾ ಯೋಧರಿಗೆ ಕೊಡುಗೆ ಅಗತ್ಯ. ಪೂರ್ಣಾನಂದದ ಪ್ರಸ್ತುತ ಸೇವೆ ಇತರ ಸಹಕಾರಿಗಳಿಗೆ ಮಾದರಿಯಾಗಬೇಕು. ರಾಷ್ಟ್ರ, ರಾಷ್ಟ್ರ ಕಾಯುವ ಯೋಧರ ಹಿತರಕ್ಷಣೆಗೆ ಪ್ರಾಧಾನ್ಯತೆ ಕೊಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
150 ಕೋಟಿ ರೂ. ವಹಿವಾಟು
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದುವರೆಗೆ 150 ಕೋಟಿ ರೂ. ಮೀರಿ ವಹಿವಾಟು ದಾಖಲಿಸಿದೆ. ಸದಸ್ಯರಿಗೆ ತ್ವರಿತ ಆಭರಣ ಈಡಿನ ಸಾಲ, ಭೂ ಅಡಮಾನ ಸಾಲ, ಜಾಮೀನು ಸಾಲ, ವಸತಿ ಸಾಲ ಸೇರಿದಂತೆ ವರ್ಷಾಂತ್ಯವರೆಗೆ ನೀಡಿದ ಸಾಲ 23,26,23,910 ರೂ.ಗಳು. ಆರ್ಥಿಕ ವರ್ಷದ ಅಂತ್ಯಕ್ಕೆ ಪಾಲು ಬಂಡವಾಳ 61,62,900 ರೂ.ಗಳು. ಒಟ್ಟು ಠೇವಣಾತಿ ಪ್ರಮಾಣ ವರ್ಷಾಂತ್ಯಕ್ಕೆ 28,93,50,877 ಕೋಟಿ ರೂ.ಗಳಿಗೇರಿದೆ. ವರ್ಷಾರಂಭದಲ್ಲಿ ಈ ಮೊತ್ತ 27,41,13,309 ರೂ.ಗಳಿತ್ತು.
ಸದಸ್ಯರಿಗೆ ಶೇ.10 ಡಿವಿಡೆಂಡ್
2023-24ನೇ ಸಾಲಿನ ಅಂತ್ಯಕ್ಕೆ ಸಂಸ್ಥೆಯ ದುಡಿಯುವ ಬಂಡವಾಳ 30,82,65,204 ರೂ.ಗಳು. ಸಹಕಾರಿಯ ಮೀಸಲು ನಿಧಿ ರೂ. 31,45,790 ರೂ.ಗಳು. ಇತರ ನಿಧಿಗಳು 42,29,962 ರೂ. ಮತ್ತು ಒಟ್ಟು 73,75,714.70ರಷ್ಟು ನಿಧಿಯನ್ನು ಸಹಕಾರಿಯು ಹೊಂದಿದೆ ಎಂದು ಗಣೇಶ್ ಶೆಣೈ ಮಾಹಿತಿ ನೀಡಿದರು. ಸದಸ್ಯರಿಗೆ ಶೇ.10 ಡಿವಿಡೆಂಡ್ ಅನ್ನು ಇದೇ ಸಂದರ್ಭ ಘೋಷಿಸಲಾಯಿತು. ಪೂರ್ಣಾನಂದ ಪ್ರೊಡಕ್ಟ್ ಯೋಜನೆಯನ್ನು ಈ ಸಾಲಲ್ಲಿ ಲಾಭದಾಯಕವಾಗಿ ಪರಿವರ್ತಿಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
ಮಾನವೀಯತೆ ಆಧಾರಿತ ಸಹಕಾರಿ ರಂಗ
ಸಹಕಾರಿ ರಂಗ ಮಾನವೀಯತೆ ಆಧಾರಿತ, ಸಾಮಾಜಿಕ ಸೇವೆಗಳ ಬಗ್ಗೆ ತುಂಬು ತುಡಿತ ಹೊಂದಿರುವ ಅಪೂರ್ವ ರಂಗವೆಂದು ಬಣ್ಣಿಸಿದ ಮುಖ್ಯ ಅತಿಥಿ, ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಭಟ್, ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ದಕ್ಷ ಆಡಳಿತ ವರ್ಗ, ನಿರ್ದೇಶಕರ ತಂಡ , ಸಿಬ್ಬಂದಿಗಳ ಪ್ರಾಮಾಣಿಕತೆ, ಕ್ರಿಯಾಶೀಲತೆ, ಕರ್ತವ್ಯಪರತೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾಗಿರುವ ಅಕ್ಷತಾ ನಾಯಕ್ ಮತ್ತು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರನ್ನು ಪುರಸ್ಕರಿಸಲಾಯಿತು. ಶ್ರೀ ಪೂರ್ಣಾನಂದ ಸಂಸ್ಥೆಯ ೮೦ ವರ್ಷ ಮೀರಿದ ಹಿರಿಯ ಸದಸ್ಯರಾದ ದೇವರಾಯ ಸಾಮಂತ, ವಿಶ್ವನಾಥ ಪ್ರಭು, ವಿಠ್ಠಲ್ ಕೆ., ಕೃಷ್ಣ ನಾಯಕ್ ಟಿ., ವಸಂತಿ ಎನ್.ಪ್ರಭು, ಬಾಲಕೃಷ್ಣ ನಾಯಕ್ ಎ., ರಾಮಕೃಷ್ಣ ಶೇರ್ವೆಗಾರ್, ರಮೇಶ್ ನಾಯಕ್ ಇವರನ್ನು ಸನ್ಮಾನಿಸಲಾಯಿತು.
ಪ್ರತಿಭೆಗಳಿಗೆ ‘ಸಂವಿಧಾನ ಕೃತಿ’ ನೀಡಿ ಸಮ್ಮಾನ
ಬಿಎಸ್ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ವಿಜೇತ ಸೃಷ್ಟಿ ಸಹಿತ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಡಾ.ಪಿ.ಎ.ಭಟ್ ವಿರಚಿತ ಸಂವಿಧಾನ ಕೃತಿಗಳನ್ನು ನೀಡಿ ಸನ್ಮಾನಿಸಲಾಯಿತು.
ಲೆಕ್ಕಪರಿಶೋಧಕ ನರೇಂದ್ರ ಪೈ, ಶ್ರೀ ಪೂರ್ಣಾನಂದ ಸಂಸ್ಥೆ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ವಿಶ್ವನಾಥ ಕೆ., ಮೋಹನ್ ನಾಯಕ್, ಜಗದೀಶ್ ಶೆಣೈ, ಅರವಿಂದ ಶೆಟ್ಟಿ, ದಯಾನಂದ ನಾಯಕ್ , ಸದಾನಂದ ಪ್ರಭು, ರವೀಂದ್ರ ಪ್ರಭು, ಗೀತಾ ರತ್ನಾಕರ್, ಶ್ರೀವಲ್ಲಭಿ, ಶ್ರೀ ಪೂರ್ಣಾನಂದ ಪ್ರಧಾನ ವ್ಯವಸ್ಥಾಪಕಿ ಅನಿತಾ ಉಪಸ್ಥಿತರಿದ್ದರು. ಜನತಾ ಬಜಾರ್ ನಿರ್ದೇಶಕಿ ಮದಲಾಕ್ಷಿ ರೈ, ಸಹಕಾರ ಭಾರತಿ, ಮಂಗಳೂರು ಜಿಲ್ಲಾ ಮಹಿಳಾ ಪ್ರಮುಖ್ ಸುಜಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಶ್ರೀ ಪೂರ್ಣಾನಂದ ಸಂಸ್ಥೆ ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿದರು. ಬಾಲಕೃಷ್ಣ ಕೊಡಂಗೆ ಸಹಕಾರಿ ಗೀತೆ ಹಾಡಿದರು. ಶ್ರೀ ಪೂರ್ಣಾನಂದ ನಿರ್ದೇಶಕಿ ಗೀತಾ ರತ್ನಾಕರ್ ನುಡಿ ನಮನ ಸಲ್ಲಿಸಿದರು. ನಿರ್ದೇಶಕ ಹರಿಶ್ಚಂದ್ರ ಪ್ರಭು ವಂದಿಸಿದರು. ಶ್ರೀ ಪೂರ್ಣಾನಂದ ಸಿಬ್ಬಂದಿಗಳಾದ ಉಪೇಂದ್ರಕುಮಾರ್ ಪ್ರಾರ್ಥನೆ ಹಾಡಿದ್ದು, ಧನ್ಯತಾ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com