ಒಡಿಯೂರು ಸೊಸೈಟಿಯ ಕಿನ್ನಿಗೋಳಿ ಶಾಖೆ ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ
ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸಮಾಜಮುಖಿಯಾದರೆ ಉನ್ನತಿ ಆಗುತ್ತದೆ. ಪುರುಷಾರ್ಥಗಳ ಪೈಕಿ ಅರ್ಥ ಅಂದರೆ ಆರ್ಥಿಕ ವ್ಯವಸ್ಥೆಯ ಜೊತೆಗೆ ಧರ್ಮ ಬೇಕು. ಧರ್ಮಯುಕ್ತವಾದ ಅರ್ಥಕ್ಕೆ ಅಪಾಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 20ನೇ ನೂತನ ಶಾಖೆಯನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅರ್ಥದ ಸರಿಯಾದ ಬಳಕೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಧರ್ಮಶ್ರದ್ಧೆಯ ಕೊರತೆಯಿಂದ ಈಗ ಜಗತ್ತಿನಲ್ಲಿ ಕೆಲವೊಂದು ಅಧ್ವಾನಗಳು ನಡೆಯುತ್ತಿದೆ. ರಾಮಾಯಣ, ಭಾಗವತ, ಭಗವದ್ಗೀತೆಗಳ ಅಧ್ಯಯನದಿಂದ ಇದನ್ನು ತಡೆಯಬಹುದು. ಸಹಕಾರಿಗೆ ಜೀವಾಳವೇ ಗ್ರಾಹಕರು. ಠೇವಣಿ ಎಂದರೆ ನಗು ಇದ್ದಂತೆ. ಸಾಲ ಎಂದರೆ ಕೋಪ ಇದ್ದಂತೆ. ಸಾಲ ಮರುಪಾವತಿ ಸರಿಯಾಗಿ ಆಗುತ್ತಿದ್ದರೆ ಮಾತ್ರ ಸಹಕಾರಿಯ ಚಟುವಟಿಕೆಗಳು ಮುಂದುವರಿಯುತ್ತದೆ. ಶ್ರದ್ಧೆಯ ಕೆಲಸವೇ ಯಶಸ್ಸಿನ ಗುಟ್ಟು. ವ್ಯವಸ್ಥಿತ ಸೇವೆ ಆದರೆ ಬೆಳವಣಿಗೆ ಸಾಧ್ಯ. ಇದಕ್ಕಾಗಿ ಸಿಬ್ಬಂದಿ ವರ್ಗಕ್ಕೂ ಅಭಿನಂದನೆಗಳು. ಫಲಾಪೇಕ್ಷೆ ಇಲ್ಲದೆ ದುಡಿಯುವ ನಿರ್ದೇಶಕ ಮಂಡಳಿ ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುತ್ತಿದೆ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.
ಸಾಧ್ವಿ ಮಾತಾನಂದಮಯಿ ಅನುಗ್ರಹ ಸಂದೇಶ ನೀಡಿ,
ಕಿನ್ನಿಗೋಳಿಯ ದೊಡ್ಡ ಮರದಡಿಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಬೇಕು.ಭಾವಶುದ್ಧಿಯಿಂದ ಕಾರ್ಯಸಿದ್ಧಿಯಾಗಲಿದೆ. ರಾಷ್ಟ್ರದ ಆರ್ಥಿಕತೆ ಬೆಳೆಯಬೇಕಾದರೆ ಗ್ರಾಮೀಣ ಪ್ರದೇಶಗಳು ಬೆಳೆಯಬೇಕು. ಗ್ರಾಮೀಣ ಪ್ರದೇಶಗಳು ಬೆಳೆಯಬೇಕಾದರೆ ಚಟುವಟಿಕೆಗಳು ಆಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ, ಸ್ವಾಮೀಜಿಯವರ ಸಂಕಲ್ಪ ಈಡೇರಿಸಲು ಕಾರ್ಯ ತತ್ಪರರಾಗಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಬಜ್ಪೆ, ಕಿನ್ನಿಗೋಳಿ ಗ್ರಾಮ ಪಂಚಾಯತಿ ಸ್ಥಾನಮಾನದಿಂದ ಪಟ್ಟಣ ಪಂಚಾಯತಿ ಆಗಿ ಬದಲಾಗಿದೆ. ಇದರ ಅಭಿವೃದ್ಧಿಗೆ ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆ ಆಗಬೇಕು. ಗ್ರಾಮ ವಿಕಾಸದ ಮೂಲಕ ಹೆಚ್ಚಿನ ಕೆಲಸ ಸ್ವಾಮೀಜಿಯವರು ಮಾಡುವಂತಾಗಲಿ. ಒಡಿಯೂರು ಸೊಸೈಟಿಯ ಕಿನ್ನಿಗೋಳಿ ಶಾಖೆ ಮುಂದಿನ ದಿನಗಳಲ್ಲಿ ನಂಬರ್ ಒನ್ ಶಾಖೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಶುಭ ಹಾರೈಸಿದರು.
ಉದ್ಯಮಿ ಗಿರೀಶ್ ಎಂ.ಶೆಟ್ಟಿ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದ ಆಗಮನದಿಂದ ಕಿನ್ನಿಗೋಳಿ ಅಭಿವೃದ್ಧಿ ಆಗಲಿದೆ. ಧನ ಸಂಗ್ರಹ ಎಲ್ಲಿ ಮಾಡಬೇಕು ಅದಕ್ಕೆ ಭದ್ರತೆ ಏನು ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸುಲಭವಾಗಿ ದೊರೆಯುತ್ತದೆ. ಒಡಿಯೂರು ಸೊಸೈಟಿಯಲ್ಲಿ ಹಣ ಸಂಗ್ರಹ ಮಾಡಿದರೆ ದೇವರ ಜಾಗದಲ್ಲಿ ಇಟ್ಟಂತೆ ಎಂದು ವಿಶ್ಲೇಷಣೆ ಮಾಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ ಮಾತನಾಡಿ, ಮಹಿಳೆಯರಿಗೆ ಉತ್ತಮ ಸೇವೆ ಕೊಡಬೇಕು. ಮಹಿಳೆಯರಿಗೆ ಭಾಷೆಯ ತೊಡಕಿನ ಹೆದರಿಕೆ ಇದೆ. ಅದನ್ನು ತೊಡೆದು ಹಾಕಬೇಕಿದೆ ಎಂದು ಹೇಳಿದರು.
ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ
ಭಾರತಿ ಜಿ.ಭಟ್ ಶುಭ ಹಾರೈಸಿ, ಒಡಿಯೂರು ಸೊಸೈಟಿಯ ಅಧ್ಯಕ್ಷ ಸುರೇಶ್ ರೈ ಸಮರ್ಥ ನಾಯಕರಾಗಿದ್ದು ಅವರ ನಿಸ್ವಾರ್ಥ ಸೇವೆ ಸನ್ಮಾನಕ್ಕೆ ಅರ್ಹ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವುದೇ ಭಾಗ್ಯ. ಒಡಿಯೂರು ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಮಾದರಿ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಬಿಲ್ ಸ್ಕೋರ್ ಮಾತ್ರ ಗಮನಿಸುತ್ತಾರೆ. ಆದರೆ ಸಹಕಾರಿ ಕ್ಷೇತ್ರದಲ್ಲಿ ಮಾನವೀಯತೆಗೆ ಹೆಚ್ಚಿನ ಬೆಲೆ ಇದೆ. ಕೌಟುಂಬಿಕ ಮೌಲ್ಯವೂ ಇಲ್ಲಿದೆ ಎಂದರು.
ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ ಶುಭ ಹಾರೈಸಿದರು. ಸಂಯುಕ್ತ ಸಹಕಾರಿಯ ಜಿಲ್ಲಾ ಅಧಿಕಾರಿ ವಿಜಯ್ ಬಿ.ಎಸ್ ಮಾತನಾಡಿ, ಒಡಿಯೂರು ಸೊಸೈಟಿ ಒಂದು ಶಕ್ತಿ. ದಕ್ಷತೆಯಿಂದ ಕೆಲಸ ಮಾಡುವ ಸಂಸ್ಥೆ. 13 ವರ್ಷಗಳಲ್ಲಿ 20 ಶಾಖೆ ತೆರೆದಿದೆ. ಇಡೀ ರಾಜ್ಯದಲ್ಲಿ ಮಾದರಿ ಸಂಸ್ಥೆ. ಸಹಕಾರಿ ಸಂಸ್ಥೆಯನ್ನು ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಈ ಸೊಸೈಟಿ ಮಾದರಿ ಎಂದು ಬಣ್ಣಿಸಿದರು.
ಒಡಿಯೂರು ಗ್ರಾಮವಿಕಾಸದ ಕಿರಣ್ ಯು, ದುರ್ಗಾದಯಾ ಬಿಲ್ಡಿಂಗ್ ಮುಖ್ಯಸ್ಥ ಸೀತಾರಾಮ ಶೆಟ್ಟಿ, ಪ್ರಮುಖರಾದ ಡಾ.ಕಿಶೋರ್, ಅಶೋಕ್ ಶೆಟ್ಟಿ ದುರ್ಗಾದಯಾ, ಪುರುಷೋತ್ತಮ ಶೆಟ್ಟಿ, ಸಾಯಿನಾಥ್ ಶೆಟ್ಟಿ, ಸಂಘದ ನಿರ್ದೇಶಕರು ಹಾಜರಿದ್ದರು.
ಒಡಿಯೂರು ಸೊಸೈಟಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.