ಬೃಹತ್ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ
ಮಂಗಳೂರು: ದುಶ್ಚಟಮುಕ್ತ ಸಮಾಜ ನಮಗಿಂದು ಬೇಕಾಗಿದೆ. ಇದನ್ನು ನಿರ್ಮಾಣ ಮಾಡುವುದು ಹೇಗೆ? ಆ ಬಗ್ಗೆ ಒಂದಷ್ಟು ಸ್ವಚ್ಛ ಮನಸ್ಸುಗಳು ಆಲೋಚನೆ ಮಾಡಬೇಕು. ಜೊತೆಗೆ ದುಶ್ಚಟಮುಕ್ತ, ಕೌಶಲ್ಯಭರಿತ ಹಾಗೂ ಸ್ವಚ್ಛ ಭಾರತ ನಿರ್ಮಾಣವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಭಾನುವಾರ ಒಡಿಯೂರು ಪೂಜ್ಯ ಗುರುದೇವಾನಂದ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ, ಸೇವಾ ಸಂಭ್ರಮ ಪ್ರಯುಕ್ತ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಆದ್ಯತೆ ಆಗಬೇಕು. ಇದಕ್ಕಾಗಿ ವಿದ್ಯಾರ್ಥಿ ವಲಯದಲ್ಲಿ ಮೊದಲು ಜಾಗೃತಿ ಮೂಡಿಸಬೇಕು. ಸಂತ ಮತ್ತು ಸಮಾಜ ಜೊತೆಯಾಗಿ ಸಾಗಬೇಕು ಎಂದು ಕವಿವಾಣಿ ಹೇಳುತ್ತದೆ. ಆಧ್ಯಾತ್ಮಿಕದ ಜೊತೆ ಸಮಾಜಮುಖಿ ಕೆಲಸಗಳು ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಕೆಲಸ ಮುಂದುವರಿದಿದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಒಡಿಯೂರು ಶ್ರೀಗಳು ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿಯ ಆಧಾರದಲ್ಲಿ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರದಿಂದ ಮತ್ತೊಬ್ಬರ ಜೀವ ಉಳಿಸುವ ಕೆಲಸ ನಡೆಯಲಿ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಕವಿಗಳು ಹೇಳಿದ್ದಾರೆ. ನಾವು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ಸಾಧ್ಯವಿದೆ. ಇಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಶಿಬಿರಗಳ ಮೂಲಕ ಜನರಲ್ಲಿ ಸೇವಾ ಕಾರ್ಯದ ಅರಿವು ಮೂಡುತ್ತದೆ. ಗುರುಗಳ ಮಾರ್ಗದರ್ಶನ ಇದಕ್ಕೆ ಸದಾಕಾಲ ಬೇಕು ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ವಿವಿಧ ಘಟಕಗಳು, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ, ಬಂಟರ ಸಂಘ ಜಪ್ಪು, ಯುವ ರೆಡ್‌ಕ್ರಾಸ್ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ಗುರುದೇವ ಸೇವಾ ಬಳಗ ಮಂಗಳೂರು, ಜಪ್ಪಿನಮೊಗರು ಬಂಟರ ಸಂಘ, ಕ್ರೀಡಾ ಭಾರತಿ ಮಂಗಳೂರು, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ ಇವುಗಳು ಸಹಯೋಗ ಶಿಬಿರದ ಸಹಯೋಗ ವಹಿಸಿದ್ದವು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಲ.ಎ.ಸುರೇಶ್ ರೈ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ವಂದಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಾಂತಾರಾಮ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ್ ಲ.ವಸಂತ ಶೆಟ್ಟಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕ ತಾರಾನಾಥ, ಗುರುದೇವ ಸೇವಾ ಬಳಗ ಮಂಗಳೂರಿನ ಅಧ್ಯಕ್ಷ ಜಿತೇಂದ್ರ ಕೊಟ್ಟಾರಿ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ, ಕ್ರೀಡಾಭಾರತಿಯ ಮಂಗಳೂರು ಅಧ್ಯಕ್ಷ ಕಾರಿಯಪ್ಪ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಅಸಿಸ್ಟೆಂಟ್ ಮಾರ್ಕೆಟಿಂಗ್ ಇನ್‌ಚಾರ್ಜ್ ಕೃಷ್ಣಮೂರ್ತಿ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.
ಅವಶ್ಯವಿದ್ದವರಿಗೆ ಸೇವೆಯ ಕಾರ್ಯ ತಲುಪಲಿ
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಮಾತನಾಡಿ, ಸೇವೆ ಮತ್ತು ತ್ಯಾಗ ಹಿಂದು ಸಮಾಜದ ಎರಡು ಪಿಲ್ಲರ್‌ಗಳು. ಸೇವಾ ಕಾರ್ಯ ಯಾರಿಗೆ ತಲುಪಬೇಕೋ ಅವರಿಗೆ ತಲುಪಬೇಕು. ನಿಜವಾಗಿ ಅವಶ್ಯಕತೆ ಇರುವವರಿಗೆ ಸೇವಾ ಚಟುವಟಿಕೆಗಳು ತಲುಪಿದರೆ ನಾವು ಮಾಡಿದ ಸೇವೆಗೂ ಸಾರ್ಥಕತೆ ಲಭಿಸುತ್ತದೆ ಎಂದು ತಿಳಿಸಿದರು.
ತುಳುವಿನ ಬಗ್ಗೆ ಸಾಕಷ್ಟು ಚರ್ಚೆ
ಕಾರ್ಯಕ್ರಮದಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದವು. ಮಂಗಳೂರು ವಿಶ್ವವಿದ್ಯಾಲಯ ತುಳು ಅಧ್ಯಯನ ಕೇಂದ್ರ ಸಂಯೋಜಕ ಡಾ.ಮಾಧವ ಎಂ.ಕೆ ಮಾತನಾಡಿ, ಒಡಿಯೂರು ಶ್ರೀಗಳು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯಾಸಕ್ತಿ ಉಲ್ಲೇಖನೀಯ. ಒಡಿಯೂರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತುಳು ಸಾಹಿತ್ಯ ಸಮ್ಮೇಳನ, ತುಳು ಜಾತ್ರೆ ನಡೆಯುತಿದೆ. ಒಡಿಯೂರು ಶ್ರೀಗಳು ಅನೇಕ ಸಾಹಿತ್ಯ ಗ್ರಂಥಗಳನ್ನು ತುಳುವಿಗೆ ತರ್ಜುಮೆ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694