ಮಹಾರಾಷ್ಟ್ರದ ಹರಿಬಾವು ಬಾಡಗೆಗೆ ಒಲಿದ ಗವರ್ನರ್ ಪಟ್ಟ
ದೆಹಲಿ: ಹಿರಿಯ ಸಹಕಾರಿ, ಮಹಾರಾಷ್ಟ್ರದ ಹರಿಬಾವು ಬಾಡಗೆ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಸಹಕಾರಿ ಕ್ಷೇತ್ರದಿಂದ ರಾಜಕಾರಣಕ್ಕೆ ಕಾಲಿಟ್ಟಿದ್ದ ಬಾಡಗೆ ಮೊದಲಿಗೆ ಸಹಕಾರ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಔರಂಗಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರಾಗಿದ್ದ ಇವರು ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಭಾಜಿನಗರ(ಔರಂಗಾಬಾದ್) ಮೂಲದವರಾದ ಇವರು, ಮರಾಠವಾಡದಲ್ಲಿ ಅತ್ಯುತ್ತಮ ಸಹಕಾರ ಬ್ಯಾಂಕ್‌ಗಳಲ್ಲೊಂದಾದ ದೇವಗಿರಿ ನಗರಿ ಸಹಕಾರಿ ಬ್ಯಾಂಕ್‌ನ ಸ್ಥಾಪಕರಲ್ಲೊಬ್ಬರಾಗಿದ್ದರು. ಛತ್ರಪತಿ ಸಂಭಾಜಿ ರಾಜೆ ಸಹಕಾರ್ ಉದ್ಯೋಗ್‌ನ ಮುಖ್ಯಸ್ಥರಾಗಿದ್ದರಲ್ಲದೆ, ಪುಣೆಯ ಜನತಾ ಸಹಕಾರಿ ಬ್ಯಾಂಕ್‌ನ ಷೇರುದಾರರಾಗಿದ್ದರು.
1945ರ ಆಗಸ್ಟ್ 17ರಂದು ಜನಿಸಿದ್ದ ಇವರು, 2004ರಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಕೂಡ ಆಗಿದ್ದರು. 5 ಅವಧಿಗೆ ಫುಲಂಬ್ರಿ ಕ್ಷೇತ್ರದ ಶಾಸಕರಾಗಿದ್ದರು.