ಮಂಗಳೂರು: ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರಂತರವಾಗಿ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಅವರ ಸಾಧನೆ ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಪ್ರಯೋಜನವಾಗುತ್ತದೆ. ಇದನ್ನು ಮನಗಂಡು ಎಸ್‌ಸಿಡಿಸಿಸಿ ಬ್ಯಾಂಕ್ 16 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ದಿ.ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ ಶನಿವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅವಿಭಜಿತ ದ.ಕ. ಜಿಲ್ಲೆಯ ಅಬಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಸೂಕ್ತ ಕಾರಣಕ್ಕೆ ಸಾಲ ಒದಗಿಸಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಮರು ಪಾವತಿಯಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ.ಯು.ಕೆ.ಮೋನು ಮಾತನಾಡಿ, ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾರಣ ದೇಶ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈಗಿನ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ಸಕಲ ರೀತಿಯ ಸೌಲಭ್ಯಗಳೂ ಸಿಗುತ್ತಿವೆ. ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಾರಥ್ಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಶಿಕ್ಷಣಕ್ಕೂ ನೆರವು ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
2023-2024ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ ಎಸ್.ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ಎಸ್.ರಾಜು ಪೂಜಾರಿ, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ , ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ ಪಿ., ಸದಾಶಿವ ಉಳ್ಳಾಲ್, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.