ಇದುವರೆಗೆ 77 ಸಾಮಾನ್ಯ, 15 ಮಧ್ಯಂತರ ಆಯವ್ಯಯಗಳ ಮಂಡನೆ
ಮೋಹನ್‌ದಾಸ್ ಮರಕಡ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಗೆ ತಯಾರಾಗಿದ್ದಾರೆ. ಬಹುತೇಕ ಜುಲೈ 24ರಂದು ಬಜೆಟ್ ಮಂಡನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸಂಸತ್‌ನಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ಪ್ರಾರಂಭವಾದಾಗಿನಿಂದ ಈ ತನಕ 92 ಬಜೆಟ್‌ಗಳು ಮಂಡನೆಯಾಗಿವೆ. ಈ ಬಾರಿ ಸಂಸತ್ತಿನಲ್ಲಿ ಮಂಡನೆಯಾಗಲಿರುವುದು 93ನೇ ಬಜೆಟ್. ಇದುವರೆಗೆ 77 ಸಾಮಾನ್ಯ ಬಜೆಟ್ ಮತ್ತು 15 ಮಧ್ಯಂತರ ಬಜೆಟ್‌ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಭಾರತದಲ್ಲಿ ೧860ರಲ್ಲಿ ಬಜೆಟ್ ಅನ್ನು ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಪರಿಚಯಿಸಿದರು. ಭಾರತ ಬ್ರಿಟಿಷ್ ಸಂಕೋಲೆಯಿಂದ ಹೊರಬಂದು ಸ್ವತಂತ್ರ ದೇಶವಾಗಿ ಮೂಡಿಬಂದ ಬಳಿಕ 1947ರ ನವೆಂಬರ್ 26ರಂದು ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದರು. ಅವರು ಮಂಡಿಸಿದ ಈ ಬಜೆಟ್‌ನ ಗಾತ್ರ 197.39 ಕೋಟಿ ರೂ. ಆಗಿತ್ತು. ಇದರಲ್ಲಿ ರಕ್ಷಣಾ ಇಲಾಖೆಯೊಂದಕ್ಕೇ 92.74 ಕೋಟಿ ರೂ. ಮೀಸಲಿಡಲಾಗಿತ್ತು. 1948ರ ಏಪ್ರಿಲ್ 1 ರಂದು ಪೂರ್ಣ ಪ್ರಮಾಣದ ಬಜೆಟ್ ಅನ್ನು ಷಣ್ಮುಗಂ ಚೆಟ್ಟಿ ಮಂಡಿಸಿದ್ದರು. ಅವರ ಬಳಿಕ ಹಣಕಾಸು ಸಚಿವರಾದ ಜಾನ್ ಮಥಾಯ್ 1949-50 ಹಾಗೂ 1950-51ರ ಬಜೆಟ್ ಮಂಡಿಸಿದ್ದರು. 1950-51ರ ಬಜೆಟ್‌ನಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪಿಸಲಾಯಿತು. 1957-58ರ ಬಜೆಟ್‌ನಲ್ಲಿ ಆಸ್ತಿ ತೆರಿಗೆಯನ್ನು ಪರಿಚಯಿಸಲಾಯಿತು.
ಬಜೆಟ್ ಮಂಡಿಸಿದ್ದರು ನೆಹರು, ಇಂದಿರಾ, ರಾಜೀವ್ ಗಾಂಧಿ
ಪ್ರತಿವರ್ಷ ಲೋಕಸಭೆಯಲ್ಲಿ ಹಣಕಾಸು ಸಚಿವರೇ ಬಜೆಟ್ ಮಂಡಿಸುವುದು ಸಂಪ್ರದಾಯ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ದೇಶದ ಪ್ರಧಾನಿಯಾದವರೂ ಬಜೆಟ್ ಮಂಡಿಸಿದ್ದಿದೆ. ಮೂರು ಬಾರಿ ಲೋಕಸಭೆಯಲ್ಲಿ ಪ್ರಧಾನಿಯಾದವರು ಬಜೆಟ್ ಮಂಡಿಸಿದ್ದು ಈ ಮೂವರೂ ನೆಹರು-ಗಾಂಧಿ ಕುಟುಂಬದವರಾಗಿದ್ದರು ಎಂಬುದು ವಿಶೇಷ. ಪ್ರಧಾನಮಂತ್ರಿ ಪದವಿಯಲ್ಲಿದ್ದು ಮೊದಲ ಸಲ ಬಜೆಟ್ ಮಂಡಿಸಿದ್ದು ಜವಾಹರಲಾಲ್ ನೆಹರು. 1958ರಲ್ಲಿ ಹಣಕಾಸು ಸಚಿವರಾಗಿದ್ದ ಟಿ.ಟಿ ಕೃಷ್ಣಮಾಚಾರಿ ರಾಜೀನಾಮೆ ನೀಡಿದ್ದರಿಂದ ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಬಜೆಟ್ ಮಂಡಿಸಿದ್ದರು. 1970ರಲ್ಲಿ ಮೊರಾರ್ಜಿ ದೇಸಾಯಿ ರಾಜೀನಾಮೆ ನೀಡಿದ್ದರಿಂದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಜೆಟ್ ಮಂಡಿಸಿದ್ದರು. 1987-88ರಲ್ಲಿ ಹಣಕಾಸು ಸಚಿವ ವಿ.ಪಿ.ಸಿಂಗ್ ರಾಜೀನಾಮೆ ನೀಡಿದ್ದರಿಂದ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಜೆಟ್ ಮಂಡಿಸಿದ್ದರು.
ಬಜೆಟ್ ಮಂಡಿಸಿದ ಮೊದಲ ಮಹಿಳೆ
1970ರಲ್ಲಿ ಮೊರಾರ್ಜಿ ದೇಸಾಯಿ ವಿತ್ತ ಖಾತೆಗೆ ರಾಜೀನಾಮೆ ನೀಡಿದ್ದರಿಂದ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಬಜೆಟ್ ಮಂಡಿಸಿದ್ದರು. ಕೇಂದ್ರ ಬಜೆಟ್ ಮಂಡಿಸಿದ ಮೊಟ್ಟಮೊದಲ ಮಹಿಳೆ ಎಂಬ ಕೀರ್ತಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ. ಇವರ ನಂತರ ಭಾರತದ ಬಜೆಟ್ ಮಂಡಿಸಿದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್. ಇವರು ನಾಡಿದ್ದು ಮಂಡಿಸಲಿರುವ ಬಜೆಟ್ ಸತತ ಏಳನೆಯದ್ದು. ಇದು ಕೂಡ ದಾಖಲೆಯೇ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694.