ಶೇ.5ರಿಂದ 2ಕ್ಕೆ ಇಳಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ
ಮಂಗಳೂರು: ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೂ ಸೇರಿದಂತೆ ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪ್ಕೊ ನಿಯೋಗವು ಮಂಗಳವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದೆ.
ವಿತ್ತ ಸಚಿವರಾಗಿ ಮರು ನೇಮಕಗೊಂಡಿರುವ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ ಕ್ಯಾಂಪ್ಕೊ ಆಡಳಿತ ಮಂಡಳಿ, ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಮನವಿ ಸಲ್ಲಿಸಿತು. ಅಡಿಕೆಯ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ 2ಕ್ಕೆ ಇಳಿಸಬೇಕು. ಇದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ಅಡಿಕೆ ಖರೀದಿಸಲು ಸಹಕಾರಿಯಾಗುತ್ತದೆ. ಇದರಿಂದ ತೆರಿಗೆ ಕಳ್ಳತನಕ್ಕೂ ಕಡಿವಾಣ ಬೀಳಲಿದ್ದು, ಸರಕಾರಕ್ಕೂ ಹೆಚ್ಚುವರಿ ಆದಾಯ ಬರಲಿದೆ. ಮೈಲುತುತ್ತು ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು, ಕಾರ್ಬನ್ ಫೈಬರ್ ದೋಟಿಯ ಆಮದು ಸುಂಕವನ್ನೂ ಕಡಿಮೆ ಮಾಡಬೇಕು ಎಂದು ಕ್ಯಾಂಪ್ಕೊ ನಿಯೋಗ ಮನವಿ ಮಾಡಿದೆ. ಅಡಿಕೆ ಮತ್ತು ಕರಿಮೆಣಸಿನ ಅಕ್ರಮ ಆಮದು ತಡೆಗಟ್ಟಲು ಕೂಡ ಕ್ಯಾಂಪ್ಕೊ ಆಗ್ರಹಿಸಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಎಲ್ಲ ದೊಡ್ಡ ಸರಕು ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು ಮತ್ತು ತಪಾಸಣಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದೆ.
ಅಡಿಕೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು , ಜನರ ಜನಹೀವನದಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಅಡಿಕೆಯ ನಾನಾ ಉಪಯೋಗಗಳ ಅನ್ವೇಷಣೆ ಮತ್ತು ಅಡಿಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಯಾಂಪ್ಕೊ ಮನವಿಯಲ್ಲೇನಿದೆ?
- ಅಡಿಕೆ, ಮೈಲುತುತ್ತು ಜಿಎಸ್‌ಟಿ ಇಳಿಕೆ ಮಾಡಿ
- ಕಾರ್ಬನ್ ಫೈಬರ್ ದೋಟಿಯ ಆಮದು ಸುಂಕ ಕಡಿಮೆ ಮಾಡಿ
- ಅಡಿಕೆ, ಕರಿಮೆಣಸಿನ ಅಕ್ರಮ ಆಮದು ತಡೆಗಟ್ಟಿ
- ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯನ್ನು ನಾಶ ಮಾಡಿ
- ಜಿಎಸ್‌ಟಿ ಸ್ವರೂಪ ಸರಳಗೊಳಿಸಿ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: editor@sahakaraspandana.in , sahakaraspandana@gmail.com
ಮಾಹಿತಿಗೆ ಸಂಪರ್ಕಿಸಿ: 9901319694.