ಮಂಗಳೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಸಾಧ್ವಿ ಮಾತಾನಂದಮಯಿ ಅವರ ಮಾರ್ಗದರ್ಶನದಲ್ಲಿ 2011ರಲ್ಲಿ ಪ್ರಾರಂಭವಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ವರದಿ ಸಾಲಿನಲ್ಲಿ 546 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಶೇ.26 ಏರಿಕೆ ಕಂಡಿದೆ. ಸಂಘದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಅವಲೋಕನ ಸಭೆಯಲ್ಲಿ ಮಾಹಿತಿ ನೀಡಿದ ಡಿಯೂರು ಸಹಕಾರಿಯ ಅಧ್ಯಕ್ಷ ಎ.ಸುರೇಶ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 4.50 ಕೋಟಿ ರೂ. ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.43 ಪ್ರಗತಿ ಸಾಧಿಸಿದೆ. 19 ಶಾಖೆಗಳ ಮೂಲಕ 302 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 244 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ಪಾಲು ಬಂಡವಾಳ 2 ಕೋಟಿ ರೂ., ನಿಧಿಗಳು 12.14 ಕೋಟಿ ರೂ. ಮತ್ತು ದುಡಿಯುವ ಬಂಡವಾಳ 320 ಕೋಟಿ ರೂ. ಹೊಂದಿದೆ ಎಂದು ಹೇಳಿದರು.
ಎಲ್ಲ ಶಾಖೆಗಳು ಗಣಕೀಕೃತಗೊಂಡು ಕೋರ್ ಸಿಸ್ಟಂ ಸಾಫ್ಟ್‌ವೇರ್ ಅಳವಡಿಸಿದೆ. ಪ್ರತಿವರ್ಷವೂ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ ಪಡೆಯುತ್ತಿದೆ. ಸದಸ್ಯರಿಗೆ ನಿರಂತರ ಶೇ.15 ಡಿವಿಡೆಂಡ್ ನೀಡುತ್ತ ಬಂದಿದೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಸುರೇಶ್ ರೈ ಹೇಳಿದರು. ಸಂಘದ ಆಡಳಿತ ಕಚೇರಿ ಮತ್ತು ಪಂಪ್‌ವೆಲ್ ಶಾಖೆ ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು 7000 ಚದರ ಅಡಿ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ.
ಐದು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ ಎಂದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಲೋಕನಾಥ ಶೆಟ್ಟಿ ಮಂಗಳೂರು, ವೇಣುಗೋಪಾಲ ಮಾರ್ಲ, ಸೇರಾಜೆ ಗಣಪತಿ ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ಉಪಸ್ಥಿತರಿದ್ದರು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತೆ ರೈತರಿಗೆ ಅವರ ಜಮೀನು ಹಾಗೂ ತೋಟದಲ್ಲಿ ಪಾಠ ಎನ್ನುವ ಶಿರೋನಾಮೆಯಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ನೀಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಹಕಾರಿಯ ಸಿಬ್ಬಂದಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಷಯದಲ್ಲಿ ದೇಶೀಯ ಕೋರ್ಸ್ ಮೂಲಕ ತರಬೇತುಗೊಳಿಸಿ ಕೃಷಿಕರ ಸೇವೆಗೆ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಐವರು ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದಾರೆ.
ಎ.ಸುರೇಶ್ ರೈ ಅಧ್ಯಕ್ಷರು,
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ