ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ, ಶ್ರೀ ಆನಂದ ಕೆ ಹಾಗೂ ಶ್ರೀ ಅಬ್ಬಾಸ್ ಎಮ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ನಾಟೆಕಲ್ ಶಾಖೆಯು ವ್ಯವಸ್ಥಿತವಾಗಿ ರೂಪಿಸಲು ಹಾಗೂ ಹೆಚ್ಚಿನ ಪ್ರಗತಿ ಹೊಂದಲು ನಾಟೆಕಲ್ ಪರಿಸರದವರ ಸಹಕಾರವೇ ಕಾರಣ. ಗ್ರಾಹಕರು ಒಳ್ಳೆಯ ವ್ಯವಹಾರವನ್ನು ನೀಡುತ್ತಿದ್ದು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವುದರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮುಡಿಪು ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಹಾಗೂ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ಹಾಗೂ ವಿವಿಧ ರೀತಿಯ ಸಾಲಗಳನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿ ಸಹಕಾರಿ ಸಂಘವಾಗಿ ಗುರುತಿಸಿ ಕೊಂಡಿದೆ ಎಂದರು. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘದಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಸಂಘದ ಸದಸ್ಯರಾದ ಶ್ರೀ ಆನಂದ್ ರವರು ಸಂಘದ ವಾರ್ಷಿಕೋತ್ಸವಕ್ಕೆ ಶುಭವನ್ನು ಹಾರೈಸಿ,ಸಿಬ್ಬಂದಿಗಳ ನಗುಮೊಗದ ಸೇವೆ,ಕಾಳಜಿ ಹಾಗೂ ಸೌಜನ್ಯ ದ ಬಗ್ಗೆ ಹರ್ಷವನ್ನು ವ್ಯಕ್ತ ಪಡಿಸಿದರು. ಇಂತಹ ಸೇವೆಯನ್ನು ಸಹಕಾರಿ ಸಂಘಗಳಲ್ಲಿ ಮಾತ್ರ ಲಭ್ಯವೆಂದರು. ಸಂಘವು ೩೦ ಶಾಖೆಗಳನ್ನು ಹೊಂದಿರುವುದ್ದಕ್ಕೆ ಅಭಿನಂದಿಸಿ ಕಾರ್ಯಕ್ರಮ ಕ್ಕೆ ಶುಭವನ್ನು ಹಾರೈಸಿದರು.
ಸಂಘದ ಸದಸ್ಯರಾದ ಶ್ರೀ ಅಬ್ಬಾಸ್‌ರವರು ಮಾತನಾಡಿ ಸಂಘದಲ್ಲಿ ಲಭ್ಯವಿರುವ ಸೇವೆಗಳ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಕೋವಿಡ್ ಸಂದರ್ಭದಲ್ಲಿ ವಿಶೇಷ ಚಿನ್ನಾಭರಣ ಸಾಲ ನೀಡಿದ್ದು ಪ್ರಶಂಶನೀಯ. ಮುಂದಿನ ದಿನಗಳಲ್ಲಿಯೂ ಕೂಡ ಇಂತಹ ಜನಪರ ಕಾರ್ಯಕ್ರಮಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಸಂಘದ ಸದಸ್ಯರು ಹಾಗೂ ಮಂಜನಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿರವರು ವಾರ್ಷಿಕೋತ್ಸವಕ್ಕೆ ಶುಭವನ್ನು ಹಾರೈಸಿ, ಶಾಖೆಯು ಕಷ್ಟ ಕಾಲದಲ್ಲಿ ಜನರ ಸಮಸ್ಯೆಗೆ ಉತ್ತಮ ಸ್ಪಂದನೆಯನ್ನು ನೀಡಿದೆ. ಸಂಘವು ಇನ್ನಷ್ಟು ಉತ್ತುಂಗಕ್ಕೆ ಏರಿ ಹಲವಾರು ಶಾಖೆಗಳನ್ನು ತೆರೆದು ಜನರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಬಿ.ಪಿ ದಿವಾಕರ್,ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸೌಮ್ಯಲತ ರವರು ಸ್ವಾಗತಿಸಿ, ಸಿಬ್ಬಂದಿಯಾದ ಕುಮಾರಿ ರತಿಕಾರವರು ವಂದಿಸಿದರು. ನಾಟೆಕಲ್ ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಕೃಪಾಲಿ ರವರು ಕಾರ್ಯಕ್ರಮ ನಿರೂಪಿಸಿದರು.