ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಡಾ.ವಾಮನ ಶೆಣೈ ಅಭಿಪ್ರಾಯ
ಮಂಗಳೂರು: ಪ್ರಾರಂಭದ ಎಲ್ಲಾ ಸವಾಲುಗಳನ್ನು, ತೊಂದರೆಗಳನ್ನು ಮೆಟ್ಟಿ ನಿಂತು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ರಜತ ಮಹೋತ್ಸವ ಸಂಭ್ರಮ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಆರಂಭದಿಂದ ಇಂದಿನವರೆಗೆ ಇದರಲ್ಲಿ ತೊಡಗಿಸಿಕೊಂಡವರು ನಿರಂತರ ಪರಿಶ್ರಮ ಪಟ್ಟು, ಶ್ರದ್ಧಾಪೂರ್ವಕವಾಗಿ ಕೆಲಸದಿಂದ ತೊಡಗಿಸಿಕೊಂಡು ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದ್ದರಿಂದ ಈ ಸಂಸ್ಥೆ ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಸಂಘಚಾಲಕ್ ಡಾ| ವಾಮನ ಶೆಣೈ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅವರು ಸುಜೀರ್ ಸಿ.ವಿ.ನಾಯಕ್ ಹಾಲ್‌ನಲ್ಲಿ ಬುಧವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸೊಸೈಟಿಯಲ್ಲಿ ತೊಡಗಿಸಿಕೊಂಡಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ಬೆಳೆದುಬಂದವರು. ಆದ್ದರಿಂದ ರಾಷ್ಟ್ರೀಯ ಮನೋಭಾವ ಎಲ್ಲರಲ್ಲಿ ಅಡಕವಾಗಿದೆ. ಪ್ರತಿವರ್ಷದ ಲಾಭಾಂಶದಲ್ಲಿ ಒಂದು ಭಾಗವನ್ನು ಸೈನಿಕ ನಿಧಿಗೆ ನೀಡುತ್ತಿರುವುದು ಪೂರ್ಣಾನಂದ ಸಹಕಾರಿಯ ಆಡಳಿತ ಮಂಡಳಿಯ ರಾಷ್ಟ್ರೀಯ ಮನೋಭಾವವನ್ನು ತೋರಿಸುತ್ತದೆ. ಸಮಾಜದ ಎಲ್ಲ ವರ್ಗದವರ ವಿವಿಧ ಉದ್ದೇಶಗಳ ಪೂರೈಕೆಗೆ ಸೇವಾ ಮನೋಭಾವದಿಂದ ಕೆಲಸ ಮಾಡುತ್ತ ಎಲ್ಲರಿಗೂ ಪೂರ್ಣ ಆನಂದ ನೀಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಪೂರ್ಣಾನಂದ ಸಹಕಾರಿ ಸಂಘವು ಸಾಮೂಹಿಕ ಚಿಂತನೆಯ ಮೂಲಕ ಕೆಲಸ ಮಾಡುತ್ತಿದೆ. ದೇಶ ಕಾಯುವ ಸೈನಿಕರಿಗೆ ಲಾಭಾಂಶದ ಒಂದು ಭಾಗವನ್ನು ಅರ್ಪಿಸುವ ಚಿಂತನೆ ಬಹಳ ವಿಶಿಷ್ಟವಾದುದು. ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಸಾಧಕರನ್ನು ಗುರುತಿಸಿ ಗೌರವಿಸುವುದು ವೈಶಿಷ್ಟ್ಯಪೂರ್ವ ಕಾರ್ಯಕ್ರಮ. ನಿಸ್ವಾರ್ಥ ಭಾವದಿಂದ ಸೇವಾ ಚಟುವಟಿಕೆಯಲ್ಲಿ ತೊಡಗುವವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸುತ್ತ ಮುನ್ನಡೆಯಬೇಕು ಎಂದು ಡಾ.ವಾಮನ ಶೆಣೈ ಹೇಳಿದರು.

ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುವ ಶ್ರೀ ಪೂರ್ಣಾನಂದ ಸಹಕಾರಿ ಸಂಘವು ರಜತ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಪೂರ್ಣಾನಂದ ಸಹಕಾರಿಯು ಮಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ, ದೇಶದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
೨೫ ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಶಕ್ತ ಕುಟುಂಬಗಳಿಗೆ ಸಹಾಯಧನ ನೀಡಲಾಯಿತು. ಸ್ಕಾಲರ್‌ಶಿಪ್ ಮಾಸ್ಟರ್ ಖ್ಯಾತಿಯ ಕೆ.ನಾರಾಯಣ ನಾಯ್ಕ್, ಅಕ್ಷರ ಸಂತ ಹರೇಕಳ ಹಾಜಬ್ಬ, ಡಾ.ಪಿ ಅನಂತಕೃಷ್ಣ ಭಟ್, ವಿನೋದ್ ಶೆಣೈ, ಜೀ ಸರಿಗಮಪ ಚಾಂಪಿಯನ್ ಅಶ್ಮಿತ್ ಎ.ಜೆ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರತೀಕ್ಷಾ ಡಿ.ನಾಯಕ್, ಕಲ್ಲೇಗ ಸಂಜೀವ ನಾಯಕ್, ಕಡಬ ಅಚ್ಯುತ ಪ್ರಭು, ಪ್ರೇಮಾನಂದ ಶೆಟ್ಟಿ, ಪ್ರವೀಣ್‌ಚಂದ್ರ ನಾಯಕ್ ಮೊದಲಾದವರನ್ನು ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಸದ ಕ್ಯಾ। ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್, ಕುಡಾಳ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ದ.ಕ. ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಸಂಜೀವ ದರ್ಬೆ, ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ ಶಿವಪಾಡಿ, ದ.ಕ. ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಭಾಸ್ಕರ ದೇವಸ್ಯ, ಪುರೋಹಿತ ಪ್ರಶಾಂತ್ ಭಟ್, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಹೃಷಿಕೇಶ್ ವಂದಿಸಿದರು.

