ರಾಯಚೂರು: ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ರಾಯಚೂರು ಇದರ 2025-26ನೇ ಸಾಲಿನ ಸರ್ವ ಸದಸ್ಯರ 5ನೇ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ರಾಯಚೂರಿನ ಕೋಠಾರಿ ಫಂಕ್ಷನ್ ಹಾಲ್ (ಹಳೇ) ನಲ್ಲಿ ಸಹಕಾರಿಯ ಅಧ್ಯಕ್ಷರಾದ ಮಲ್ಹಾರಾವ್ ಕುಲಕರ್ಣಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಭರತೇಶ್ ಬಿ. ಶೀಲವಂತರ್ ಪ್ರಾಸ್ತಾವಿಕ ಮಾತನಾಡಿ ಸಹಕಾರಿಯ ಕಳೆದ ಐದು ವರ್ಷಗಳ ಪ್ರಗತಿ ಮತ್ತು ಸಹಕಾರಿಯ ಧ್ಯೇಯ ಉದ್ದೇಶಗಳ ಅಡಿಯಲ್ಲಿ ಸದಸ್ಯರಿಗೆ ಸಹಕಾರಿಯಲ್ಲಿನ ವಿವಿಧ ಠೇವಣಿ ಮತ್ತು ಪತ್ತಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಏಳಿಗೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡು ಸಹಕಾರಿಯು ಗುಣಮಟ್ಟದ ವ್ಯವಹಾರ ನಡೆಸಿಕೊಂಡು ಬರುತ್ತಿರುವುದರಿಂದ ಮತ್ತು ಸಹಕಾರಿಯಲ್ಲಿನ ಸೇವೆಗಳನ್ನು ಸದಸ್ಯರು ಉತ್ತಮ ರೀತಿಯಲ್ಲಿ ಬಳಸಿಕೊಂಡ ಕಾರಣ ಸಹಕಾರಿಯು ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು. ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿಯಪ್ಪ ಹವಲ್ದಾರ್ ಅವರು 2025-26ನೇ ಸಾಲಿನ ವಾರ್ಷಿಕ ವರದಿ ಮತ್ತು ಸಾಮಾನ್ಯ ಸಭೆಯ ಸೂಚನಾ ಪಾತ್ರದಲ್ಲಿರುವ ಎಲ್ಲಾ ವಿಷಯಗಳನ್ನು ಸಭೆಗೆ ಮಂಡಿಸಿ ವಿಷಯವಾರು ಚರ್ಚಿಸಿದ ನಂತರ ಸಭೆಯ ಸೂಚನಾ ಪಾತ್ರದಲ್ಲಿರುವ ಎಲ್ಲಾ ವಿಷಯಗಳಿಗೆ ಸಾಮಾನ್ಯ ಸಭೆಯ ಅನುಮೋದನೆ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಹಾರಾವ್ ಕುಲಕರ್ಣಿ ಅವರು ಸಹಕಾರಿಯು ರೂಪಾಯಿ 21.25 ಲಕ್ಷಗಳ ಷೇರು ಬಂಡವಾಳವನ್ನು, ರೂಪಾಯಿ 7.53 ಕೋಟಿಗಳ ಠೇವಣಿಯನ್ನು, ರೂಪಾಯಿ 2.38 ಕೋಟಿಗಳ ಹೂಡಿಕೆಗಳನ್ನು ಒಟ್ಟು ರೂಪಾಯಿ 7.84 ಕೋಟಿಗಳ ದುಡಿಯುವ ಬಂಡವಾಳವನ್ನು ಹೊಂದಿದೆ ಹಾಗೂ ರೂಪಾಯಿ 5.17 ಕೋಟಿಗಳ ಸಾಲವನ್ನು ಸದಸ್ಯರಿಗೆ ವಿತರಿಸಿದೆ. ಒಟ್ಟು 12.70 ಕೋಟಿಗಳ ವ್ಯವಹಾರವನ್ನು ಜರುಗಿಸಿದೆ ಎಂದು ಮಾಹಿತಿ ನೀಡಿದರು. ಸಹಕಾರಿಯು ರೂಪಾಯಿ 14.24 ಲಕ್ಷಗಳ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 15% ಲಾಭಾಂಶ ಘೋಷಿಸಿದರು. ಸಹಕಾರಿಯ ಪ್ರಗತಿಗೆ ಕಾರಣರಾದ ಸಹಕಾರಿಯ ಸರ್ವ ಸದಸ್ಯರಿಗೆ, ಆಡಳಿತ ಮಂಡಳಿಯ ಸದಸ್ಯರಿಗೆ, ಸಹಕಾರಿಯ ಸಿಬ್ಬಂದಿ ಹಾಗೂ ಪಿಗ್ಮಿ ಏಜೆಂಟರ್ ಗಳಿಗೆ ಮತ್ತು ಸಹಕಾರಿಯ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸಹಕಾರಿಯ ನಿರ್ದೇಶಕರುಗಳಾದ ಕೆ.ಯರ್ರಿಸ್ವಾಮಿ, ರವಿ ಕುಮಾರ್ ಎಮ್, ರಾಜಶೇಖರ್ ಹೊಸಮನಿ, ಶಿವುಕುಮಾರ, ಮಾಯಾ, ಸುನೀಲ್ ಕುಮಾರ್ ಬಿ.ಎಂ, ಶಾಂತಾ ಹೊಗಾರ್, ಅಮೃತಾ, ಉಮಾ ಹಾಜರಿದ್ದರು. ಐಶ್ವರ್ಯ ಮತ್ತು ಮಂಗಳ ಗೌರಿ ಪ್ರಾರ್ಥನೆ ಹಾಡಿದರು. ಶ್ರೀದೇವಿ ಮಲ್ಹಾರಾವ್ ಕುಲಕರ್ಣಿ ಸ್ವಾಗತಿಸಿದರು. ರಾಜಶೇಖರ್ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ವರಿ ಪಿ.ರೆಡ್ಡಿ ವಂದಿಸಿದರು.


