ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜಯ ಪಾಟೀಲ ಕನಮಡಿ ಅಭಿಪ್ರಾಯ
ವಿಜಯಪುರ: ಜಿಲ್ಲೆಯ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಾಲ ಮರುಪಾವತಿಗೆ ಅಗತ್ಯ ಸಹಕಾರ ಒದಗಿಸುವುದು, ಬಾಕಿ ಇರುವ ಸಾಲ ವಸೂಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಹಾಗೂ ಅಮಲಜಾರಿ ಪ್ರಕರಣಗಳನ್ನು ಪರಿಹರಿಸಲು ಸಂಸ್ಥೆಗಳಿಗೆ ನೆರವು ನೀಡುವುದು ಸೌಹಾರ್ದ ಸಹಕಾರಿಗಳ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಸಂಜಯ ಪಾಟೀಲ ಕನಮಡಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ವಿಜಯಪುರದಲ್ಲಿ ಜಿಲ್ಲೆಯ ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸೌಹಾರ್ದ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸಾಲ ವಸೂಲಿ ಪ್ರಮುಖ ವಿಷಯವಾಗಿದೆ. ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡದಿದ್ದರೆ ಸಂಸ್ಥೆಗಳ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಲ ವಸೂಲಿಗೆ ಸಂಬಂಧಿಸಿದ ಪ್ರಕರಣಗಳು ಕಾನೂನು ಪ್ರಕ್ರಿಯೆಯಲ್ಲಿ ದೀರ್ಘಕಾಲ ಬಾಕಿ ಉಳಿಯದಂತೆ ಒಕ್ಕೂಟದ ಮೂಲಕ ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯ ಆರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ ಕವಟಗಿ ಸ್ವಾಗತಿಸಿದರು. ಒಕ್ಕೂಟದ ನಿರ್ದೇಶಕರಾದ ಅರುಣ ಮಠ, ಆರ್.ಡಿ. ಕುಲಕರ್ಣಿ, ಚಂದ್ರಶೇಖರ ಪಾಟೀಲ, ಸಿದ್ದು ಮಲ್ಲಿಕಾರ್ಜುನಮಠ, ದೀಪಕ ಶಿಂತ್ರೆ, ಪರಶುರಾಮ ಚಿಂಚಳಿ ಹಾಗೂ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಯಮನಪ್ಪ ಸಾತಿಹಾಳ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದ ಪಂಪನಗೌಡ ಪಾಟೀಲ ವರದಿ ಮಂಡಿಸಿದರು. ನಿರ್ದೇಶಕ ಅರುಣ ವಾರದ ವಂದಿಸಿದರು.

