ಪುತ್ತೂರು:ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ ಹಾಗೂ ನೂತನ ಸಭಾಭವನದ 3ಡಿ ಅನಾವರಣ ಕಾರ್ಯಕ್ರಮಗಳು ಸೆ.6ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ನೂತನ ಸಭಾಭವನದ 3ಡಿ ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈಗ ನಮಗೆ ಬರುವ ಅನುದಾನದಲ್ಲಿ ಸಭಾಭವನಕ್ಕೆ ನೀಡುವುದು ಖಾತ್ರಿಯಿಲ್ಲ. ಆದರೆ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ನೀಡಲಾಗುವುದು. ಶಾಸಕರಿಗೆ ಬರುವ ಅನುದಾನ ಬಳಕೆಯ ನಿಯಮ ಸರಳೀಕರಣಗೊಳಿಸಿ, ಸಭಾಭವನಗಳಿಗೂ ನೀಡಬಹುದು ಎನ್ನುವಂತಾದರೆ ಕುಲಾಲ ಭವನಕ್ಕೆ ರೂ.15 ಲಕ್ಷ ಅನುದಾನ ನೀಡಲಾಗುವುದು. ಸಂಘಕ್ಕೆ ಜಾಗ ಗುರುತಿಸಿಕೊಟ್ಟರೆ ಅದನ್ನು ಮಂಜೂರುಗೊಳಿಸಿ ಕೊಡಲಾಗುವುದು ಎಂದರು. ಸಂಘ ಸಂಸ್ಥೆಗಳಿಗೆ ಜಮೀನು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಚರ್ಚಿಸಿದ್ದು, ಪಕ್ಷಾತೀತವಾಗಿ ಎಲ್ಲಾ ಸಮಾಜಗಳಿಗೂ ಮಿತ ದರದಲ್ಲಿ ಕನಿಷ್ಠ ಅರ್ಧದಿಂದ ಒಂದು ಎಕರೆ ತನಕ ಜಾಗ ಮಂಜೂರು ಮಾಡುವುದು ಹಾಗೂ ಸರಕಾರಿ ಜಾಗದಲ್ಲಿರುವ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳನ್ನು ದೇವರ ಹೆಸರಿಗೆ ಆರ್‌ಟಿಸಿ ಮಾಡಿಕೊಡುವ ಬಗ್ಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕರು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭಗೊಂಡಿರುವ ಉಚಿತ ವೈದ್ಯಕೀಯ ಶಿಬಿರವನ್ನು ಇಂದು ದಾನಿಗಳ ಸಹಕಾರದಿಂದ ದೊಡ್ಡ ಮಟ್ಟದಲ್ಲಿ ಮುನ್ನಡೆಸಲು ಸಾಧ್ಯವಾಗಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ್ರದ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಗುಡಿ ಕೈಗಾರಿಕೆಗಳ ಮೂಲಕ ಸಮಾಜದ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ರಾಜ್ಯದ ಪ್ರಥಮ ಸಂಘವಾಗಿರುವ ಕುಂಬಾರರ ಗುಡಿ ಕೈಗಾರಿಕಾ ಸಂಘವು ಹಲವಾರು ಶಾಖೆಗಳನ್ನು ಸ್ಥಾಪಿಸಿ ಉತ್ತಮ ರೀತಿಯಲ್ಲಿ ವ್ಯವಹಾರ ನಿರತವಾಗಿದೆ.ಸಹಕಾರಿ ಕ್ಷೇತ್ರದ ಉತ್ತಮ ಸಾಧನೆಗಾಗಿ ಸಾಧನಾ ಪ್ರಶಸ್ತಿ ಪಡೆದಿದೆ ಎಂದು ಹೇಳಿ, ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ಕಳೆದ ಮಹಾಸಭೆಯಲ್ಲಿ ತಿಳಿಸಿದಂತೆ ರೂ.100 ಕೋಟಿಯಿಂದ ಠೇವಣಿಯನ್ನು 173 ಕೋಟಿಗೆ ಹೆಚ್ಚಿಸುವ ಮೂಲಕ ಪ್ರಗತಿ ಸಾಧಿಸಿದೆ. ಸಂಘದ ಲಾಭಾಂಶದಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ, ಕುಂಬಾರಿಕೆ ವೃತ್ತಿ ಮಾಡುವವರಿಗೆ 60 ವರ್ಷದ ನಂತರ ಮಾಸಾಶನ, ಕುಂಭಶ್ರೀ ಸಾಲಸಮನ್ವಯ ನಿಧಿಯ ಮೂಲಕ, ಮೃತಪಟ್ಟ ಸಾಲಗಾರರ ಸಾಲ ಸಂಪೂರ್ಣ ಮನ್ನಾ, ಡಿವಿಡೆಂಡ್ ಠೇವಣಿಗೆ ಸಮಾನವಾದ ಠೇವಣಿಯದ್ದಾಗ ಮಾತ್ರ ಡಿವಿಡೆಂಡ್ ನೀಡಲಾಗುವುದು ಎಂದರು. ಕೌಡಿಚ್ಚಾರಿನಲ್ಲಿ ರೂ.2 ಕೋಟಿ ವೆಚ್ಚದಲ್ಲಿ ಕುಂಬಶ್ರೀ ಸಹಕಾರ ಭವನ ನಿರ್ಮಾಣಗೊಳ್ಳಲಿದೆ. ಸಭಾ ಭವನಕ್ಕೆ ರೂ.1 ಲಕ್ಷ ಮೇಲ್ಪಟ್ಟು ದೇಣಿಗೆ ನೀಡಿದ ದಾನಿಗಳಿಗೆ ಒಂದು ಕಾರ್ಯಕ್ರಮಕ್ಕೆ ಸಭಾ ಭವನವನ್ನು ಉಚಿತವಾಗಿ ನೀಡಲಾಗುವುದು ಅಲ್ಲದೆ ಅವರ ಭಾವಚಿತ್ರವನ್ನು ಸಭಾಭವನದಲ್ಲಿ ಅನಾವರಣಗೊಳಿಸಲಾಗುವುದು. ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗಾಗಿ ತುಟ್ಟಿಭತ್ತೆಯನ್ನು ಶೇ.30ಕ್ಕೆ ಏರಿಕೆ ಮಾಡಿ ವೇತನದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುವುದು. ಬೆಳ್ಳಾರೆಯ ಸ್ವಂತ ಜಮೀನಿನಲ್ಲಿ ಶೀಘ್ರ ಸ್ವಂತ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗುವುದು. ಸಹಕಾರ ಸಂಘದಿಂದ ಪ್ರಗತಿ ಎಂಬ ಭಾವನೆಯಿಂದ ಸಾಲ ಪಡೆಯಲು ಬರುವಾಗ ಇರುವ ನಗುಮುಖ ಸಾಲ ಹಿಂತಿರುಗಿಸುವಾಗಲೂ ಇರಲಿ ಎಂದ ಅಧ್ಯಕ್ಷರು, ನೀಡಿದ ಸಾಲ ಹಿಂಪಡೆಯುವ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿರ್ದೇಶಕರಾದ ಗಣೇಶ್ ಪಿ., ಪದ್ಮಕುಮಾರ್ ಎಚ್., ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್ ಹಾಗೂ ರಂಜಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಶಾಸಕ ಅಶೋಕ್ ಕುಮಾರ್ ರೈ, ವೈದ್ಯಕೀಯ ಮತ್ತು ಸಮಾಜಸೇವೆಯಲ್ಲಿ ಮಹಾವೀರ ಮೆಡಿಕಲ್ ಸೆಂಟರ್‌ನ ಡಾ.ಸುರೇಶ್ ಪುತ್ತೂರಾಯ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ,ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು,ಹಾಗೂ ಇನ್ನಿತರ ಸಾಧಕರಿಗೆ ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೆ ವಿವೇಕಾನಂದ ಪದವಿ ಕಾಲೇಜಿನ ಗಣಿತ ಶಾಸ್ತ್ರ ಉಪನ್ಯಾಸಕಿ ವಿದ್ಯಾ, ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ ಐದನೇ ರ್ಯಾಂಕ್ ಪಡೆದ ಐಶ್ವರ್ಯ, ಕುಂಬಾರಿಕೆ ಕುಶಲಕರ್ಮಿ ಸೇಸಪ್ಪ ಮೂಲ್ಯ ಕೌಡಿಚ್ಚಾರು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಈಶಾನ್ವಿ ಅವರನ್ನು ಅಭಿನಂದಿಸಲಾಯಿತು.
ರೂ.3.02 ಕೋಟಿ ಲಾಭ, ಶೇ.19 ಡಿವಿಡೆಂಡ್
ವರದಿ ವರ್ಷದಲ್ಲಿ ಸಂಘವು 6,719 ಸದಸ್ಯರಿಂದ ರೂ.3,33,67,002 ಹಾಗೂ 36,093 ಡಿ ಸದಸ್ಯರಿಂದ ರೂ..27,56,315 ಪಾಲು ಬಂಡವಾಳ ಹೊಂದಿದೆ.ರೂ.154,99,93,327.59 ಠೇವಣಿ ಹೊಂದಿದೆ. ರೂ.167,55,52,105 ಸಾಲ ವಿತರಿಸಿದೆ ರೂ.117,49,03,460.40 ಸಾಲ ಹೊರಬಾಕಿ, ರೂ.5,35,59,928 ಸಾಲ ಸುಸ್ತಿಯಾಗಿರುತ್ತದೆ. ಒಟ್ಟು ರೂ.851 ಕೋಟಿ ವ್ಯವಹಾರ ನಡೆಸಿ ರೂ.3,02,36,700 ಲಾಭ ಪಡೆದಿದೆ.ಕಳೆದ ಮಹಾಸಭೆಯಲ್ಲಿ ತಿಳಿಸಿದಂತೆ ಈ ಬಾರಿ ಡಿವಿಡೆಂಡ್ 1 ಪರ್ಸೆಂಟ್ ಏರಿಕೆ ಮಾಡಿದ್ದು ಸದಸ್ಯರಿಗೆ ಶೇ.19 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಘೋಷಣೆ ಮಾಡಿದರು.
ಕುಂಬಾರಿಕೆಗೆ ಮಣ್ಣಿನ ಕೊರತೆ
ಕುಲಾಲ ಸಮಾಜದ ಕುಲ ಕಸುಬು ಆಗಿರುವ ಕುಂಬಾರಿಕೆಗೆ ಮಣ್ಣಿನ ಕೊರತೆಯಿದೆ.ಬೆಳ್ತಂಗಡಿಯ ದಿಡುಪೆಯ ಖಾಸಗಿ ವ್ಯಕ್ತಿಯೊಬ್ಬರ 4 ಎಕರೆ ಜಮೀನಿನಲ್ಲಿ ಮಾತ್ರ ಕುಂಬಾರಿಕೆಗೆ ಯೋಗ್ಯವಾದ ಮಣ್ಣು ಲಭ್ಯವಿದ್ದರೂ ಅದು ದುಬಾರಿಯಾಗಿದೆ. ಇದರಿಂದ ಮಣ್ಣಿನ ಪಾತ್ರೆಗಳ ಉತ್ಪಾದನೆ ಹಾಗೂ ಮಾರಾಟ ದುಬಾರಿಯಾಗುತ್ತಿದೆ.ಹೀಗಾಗಿ ಕುಲ ಕಸುಬು ಉಳಿಸಲು ಸಂಘದಿಂದ ಜಾಗ ಖರೀದಿಸಿಕೊಡಬೇಕು. ಇನ್ನೊಂದು ಕಡೆ ಸರಕಾರಿ ಜಮೀನಿನಲ್ಲಿ ಕುಂಬಾರಿಕೆಗೆ ಯೋಗ್ಯವಾದ ಮಣ್ಣು ಲಭ್ಯವಿದೆ. ಅದನ್ನು ಸಂಘದ ಮುಖಾಂತರ ಸರಕಾರದಿಂದ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸದಸ್ಯ ವಿಜಯ ಅವರು ಮನವಿ ಮಾಡಿದರು.ಪ್ರತಿಕ್ರಿಯಿಸಿದ ಅಧ್ಯಕ್ಷ ಭಾಸ್ಕರ ಪೆರುವಾಯಿ ಮಾತನಾಡಿ, ಸರಕಾರಿ ಜಾಗವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಅದನ್ನು ಕಾನೂನು ಪ್ರಕಾರ ಪಡೆಯವುದು ಕಷ್ಟಸಾಧ್ಯ. ಹಾಗಿದ್ದರೂ ಸಂಸದರು, ಶಾಸಕರ ಮೂಲಕ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ಸುಜಾತ, ಭವಾನಿ, ಗಣೇಶ್, ಸುಕನ್ಯಾ, ಹರೀಶ್, ಜಯಲಕ್ಷ್ಮೀ, ಚೇತನ್, ಯಶಸ್ವಿನಿ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿಗಳು ಸಹಕರಿಸಿದರು.

