ಮಂಗಳೂರು: ಸಹಕಾರ ಸಂಘಗಳ ಕಾನೂನು, ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಹಕಾರಿ ಸಂಘಗಳ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ 29ರಂದು ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳಿಗೆ ವಿಶೇಷ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಇವರ ಸಹಯೋಗದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡೀಲ್, ಮಂಗಳೂರು ಇದರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಆತ್ಮಶಕ್ತಿ ಸೌಧದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಹಕಾರ ಸಂಘಗಳಿಗೆ ಸಂಬAಧಿಸಿದ ಕಾನೂನು ವಿಚಾರಗಳು, ಸಂಘಗಳ ಭದ್ರತೆ ಮತ್ತು ಸುರಕ್ಷತಾ ಕ್ರಮಗಳು, ಕಾನೂನು ಸಮಸ್ಯೆಗಳಿಗೆ ಲಭ್ಯವಿರುವ ನೆರವು ಹಾಗೂ ಸಹಕಾರ ಸಂಘಗಳ ಸುಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುವುದು. ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಎದುರಾಗಬಹುದಾದ ಕಾನೂನು ಮತ್ತು ಸುರಕ್ಷತಾ ಸವಾಲುಗಳ ಕುರಿತು ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 10ಕ್ಕೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ. ತಾರಾನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕರಾದ ಬಿ.ಕೆ ಸಲೀಂ, ಸಹಕಾರ ಸಂಘಗಳ ದ.ಕ ಜಿಲ್ಲಾ ಉಪನಿಬಂಧಕರಾದ ಎಚ್ ಎನ್ ರಮೇಶ್, ಕಂಕನಾಡಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗುರುರಾಜ್, ದ.ಕ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಶೇಣವ, ಪಾಲಿಸಿ ಗ್ರೇಸ್ ಇನ್ಶೂರೆನ್ಸ್ ಮುಖ್ಯ ವ್ಯವಹಾರ ಅಧಿಕಾರಿ ರಾಹುಲ್ ಶೆಟ್ಟಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ. 10.45ರಿಂದ 11.30ರ ತನಕ ಖಾಯಂ ಜನತಾ ನ್ಯಾಯಾಲಯದ ಬಗ್ಗೆ ಕಾನೂನು ಅರಿವು ಮಾಹಿತಿ, 11.30ರಿಂದ 12.15ರ ತನಕ ಸಹಕಾರ ಸಂಘಗಳು ಅನುಸರಿಸಬೇಕಾದ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳು, 12.15ರಿಂದ ಮಧ್ಯಾಹ್ನ 1ರ ತನಕ ಸಹಕಾರ ಸಂಘಗಳ ಸುಭದ್ರ ಭವಿಷ್ಯಕ್ಕಾಗಿ ವಿಮಾ ಯೋಜನೆಗಳ ಲಾಭಗಳು ಮತ್ತು ಪ್ರಾಮುಖ್ಯತೆ ಇವುಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ. ಮಧ್ಯಾಹ್ನ 1ರಿಂದ 1.30ರ ತನಕ ಪ್ರಶ್ನಾವಳಿ ಹಾಗೂ ಸಂವಾದ ನಡೆಯಲಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


