ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ನೀರುಮಾರ್ಗ ಶಾಖೆಯ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಬ್ರಹ್ಮಣ್ಯ ನಗರ ನೀರುಮಾರ್ಗ ಇವರ ಜಂಟಿ ಆಶ್ರಯದೊಂದಿಗೆ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ, ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇದರ ವೈದ್ಯರಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಸುಬ್ರಹ್ಮಣ್ಯ ಭಜನಾ ಮಂಡಳಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಬ್ರಹ್ಮಣ್ಯ ನಗರ ನೀರುಮಾರ್ಗ ಇದರ ಗೌರವ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಉದ್ಘಾಟಿಸಿ ಮಾತನಾಡಿ, ಈ ವೈದ್ಯಕೀಯ ಶಿಬಿರವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 113ನೇ ಉಚಿತ ಶಿಬಿರವಾಗಿದೆ. ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಸಂಘವು ಮಾಡುತ್ತಿರುವ ಇಂತಹ ಕೆಲಸಗಳು ಶ್ಲಾಘನೀಯ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ಅಧ್ಯಕರಾದ ಲಯನ್ ರಾಮನಾಥ್ ಗಡಿಯಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಜೊತೆಯಲ್ಲಿ ಲಯನ್ ಕ್ಲಬ್ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಬರುತ್ತಿದ್ದು, ಶಿಬಿರಾರ್ಥಿಗಳು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದರು. ಮಂಗಳ ಕಾಲೇಜಿನ ಉಪನ್ಯಾಸಕಿ ವಿಜೇತಾ ಶೆಟ್ಟಿ ಮಾತನಾಡಿ ಆರೋಗ್ಯದ ಕಾಳಜಿ ಹಾಗೂ ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 14 ವರ್ಷಗಳಿಂದ ನಿರಂತರವಾಗಿ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಸದಸ್ಯರ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತ ಬರುತ್ತಿದ್ದು, ಇದು ಸಂಘದ ವತಿಯಿಂದ ಆಯೋಜಿಸಿದ 113ನೇ ಉಚಿತ ವೈದ್ಯಕೀಯ ಶಿಬಿರ ಇದಾಗಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಸಾಮಾಜಿಕ ಬದ್ಧತೆಯೊಂದಿಗೆ ನೀರುಮಾರ್ಗ ಪರಿಸರದಲ್ಲಿ ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮನೆಯ ನವೀಕರಣ ಮಾಡಿದೆ. ವಾಹನ ವಿಮೆ, ಆರೋಗ್ಯ ವಿಮೆಯನ್ನು ವಿವಿಧ ವಿಮಾ ಕಂಪನಿಗಳ ಸೌಲಭ್ಯ ಸಹಯೋಗದೊಂದಿಗೆ ಆಕರ್ಷಕ ಪ್ರೀಮಿಯಂನಲ್ಲಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರಿಗೆ ಆರೋಗ್ಯ ವಿಮೆಯನ್ನು ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಶಿಬಿರದಲ್ಲಿ ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಡುವ ಪ್ರಥಮ ಚಿಕಿತ್ಸೆ (ಸಿ.ಪಿ .ಆರ್) ಬಗ್ಗೆ ಮಂಗಳ ಆಸ್ಪತ್ರೆಯ ವೈದ್ಯ ತಂಡದವರು ಪ್ರಾತ್ಯಕ್ಷಿಕೆ ನೀಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ., ನಿರ್ದೇಶಕರಾದ ಗೋಪಾಲ ಎಂ., ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ನಿಕಟಪೂರ್ವ ಅಧ್ಯಕ್ಷರಾದ ಲಯನ್ ನರಸಿಂಹ ಪೈ, ನಿಕಟಪೂರ್ವ ವಲಯ ಅಧ್ಯಕರಾದ ಲಯನ್ ಶೀನಾ ಪೂಜಾರಿ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ, ಇದರ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಬ್ರಹ್ಮಣ್ಯ ನಗರ ನೀರುಮಾರ್ಗ ಇದರ ಅಧ್ಯಕ್ಷರಾದ ನಾರಾಯಣ ಪೂಜಾರಿ, ಕಾರ್ಯದರ್ಶಿ ಸತೀಶ ಪೂಜಾರಿ, ಮಂಗಳ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜೇಶ್ ಮೊದಲಾದವರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಾಯಕ ಪ್ರಬಂಧಕರಾದ ವಿಶ್ವನಾಥ್ ಸ್ವಾಗತಿಸಿದರು. ಪ್ರಭಾರ ಶಾಖಾಧಿಕಾರಿ ವರುಣರಾಜ್ ನಿರೂಪಿಸಿದರು. ಹಿರಿಯ ಶಾಖಾಧಿಕಾರಿ ಹರಿಣಾಕ್ಷಿ ವಂದಿಸಿದರು.







