ಪುತ್ತೂರು: ಪುತ್ತೂರಿನ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನಲ್ಲಿ ಬ್ಯಾಂಕ್ 150 ಕೋಟಿ ರೂ.ಗಳ ವ್ಯವಹಾರ ನಡೆಸಿ 1,32,33,636.40 ರೂ. ಲಾಭ ಗಳಿಸಿದೆ.
https://chat.whatsapp.com/FCEnlTkAKCC0MGPhXtX4i4
ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಮಾತನಾಡಿ, ಬ್ಯಾಂಕಿನಲ್ಲಿ ವರ್ಷಾಂತ್ಯದಲ್ಲಿ 62 ಕೋಟಿ ರೂಪಾಯಿ ಸಾಲ ಹೊರಬಾಕಿ ಹಾಗೂ 88 ಕೋಟಿ ರೂಪಾಯಿ ಠೇವಣಿ ಇದೆ. ಬ್ಯಾಂಕಿನ ಪ್ರತಿಯೊಂದು ಸಾಧನೆಗೂ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆ. ಸದಸ್ಯರಿಗೆ ಈ ಬಾರಿ 12 ಶೇ. ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಾಖೆ ತೆರೆಯುವುದು, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ, ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಕೋರ್ಸ್ ಮತ್ತು ವೃತ್ತಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುವುದು. ಆಸಕ್ತ ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದರು.
ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿಯವರು, 2025-26ನೇ ಸಾಲಿನ ವರದಿ ಮಂಡಿಸಿ, ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಠೇವಣಿ ಮತ್ತು ವಹಿವಾಟಿನಲ್ಲಿ ಒಟ್ಟು ಶೇ.18 ಬೆಳವಣಿಗೆ ಸಾಧಿಸಲಾಗಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ದಾಖಲೆಯ ಬೆಳವಣಿಗೆ ಆಗಿದೆ. ಬ್ಯಾಂಕು ಈ ವರ್ಷ ಲಕ್ನೋದಲ್ಲಿ ಜರುಗಿದ ಪಟ್ಟಣ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದಾಖಲೆ ಸಂಖ್ಯೆಯ ಐದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನ ಸ್ವಂತ ಕ್ಯೂ ಆರ್‌ಕೋಡ್ ವ್ಯವಸ್ಥೆ ಆರಂಭಿಸಲಾಗುವುದು ಎಂದರು.

ಸಭೆಯಲ್ಲಿ ಹಿರಿಯ ಸದಸ್ಯರಾದ ವಾಲ್ಟರ್ ಡಿಸೋಜ, ಜೋನ್ ಪಾಯಿಸ್, ಕಮಲಾಕ್ಷ ಬಲ್ಲಾಯ, ಜಗದೀಶ್ ಶೆಣೈ ಎಂ, ಗಣಪತಿ ಪ್ರಭು, ಗೋಪಾಲಕೃಷ್ಣ ಎಂ, ಅಬೂಬಕರ್ ಪಿ, ಸಂಜೀವ ಪೂಜಾರಿ, ಸುರೇಶ್ ಎಂ, ಡಾ.ಯು.ಪಿ.ಶಿವಾನಂದ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ನೀಡಲಾಯಿತು.
ಬ್ಯಾಂಕಿನ ನಿರ್ದೇಶಕರಾದ ಕಿರಣ್ ಕುಮಾರ್ ರೈ , ರಾಮಚಂದ್ರ ಕಾಮತ್, ರಾಜು ಶೆಟ್ಟಿ, ಸುಜೇಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ್ ಪಟ್ಲ, ಹರೀಶ್ ಬಿಜತ್ರೆ, ಸೀಮಾ ನಾಗರಾಜ್, ಕುಡ್ಪಿ ವಿಶ್ವಾಸ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು ಸ್ವಾಗತಿಸಿ, ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ಪ್ರಬಂಧಕ ಚಿದಂಬರ ಮತ್ತು ಎಜಿಎಂ ಚೇತನ್ ಸಭೆಯ ವ್ಯವಸ್ಥೆ ನಿರ್ವಹಣೆ ಮಾಡಿದರು. ವಿಟ್ಲ ಶಾಖೆಯ ಪ್ರಬಂಧಕಿ ಜ್ಯೋತಿ ಎನ್.ಎಸ್. ಹಾಗೂ ಹಿರಿಯ ಸಹಾಯಕ ಪವನ್ ನಾಯಕ್ ಬಿ. ಕಾರ್ಯಕ್ರಮ ನಿರೂಪಿಸಿದರು.


