ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಅಧಿಕಾರಾವಧಿಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಆಗಸ್ಟ್ 6ಕ್ಕೆ ಮುಂದೂಡಿದೆ.
https://chat.whatsapp.com/FCEnlTkAKCC0MGPhXtX4i4
ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠದ ಮುಂದೆ ಜುಲೈ 31ರಂದು ಪ್ರಾಥಮಿಕ ವಿಚಾರಣೆಗೆ ಪ್ರಕರಣ ನಿಗದಿಯಾಗಿದ್ದರೂ, ಅಂದು ನ್ಯಾಯಾಲಯದಲ್ಲಿ ಕಲಾಪ ನಡೆಯದ ಕಾರಣ ವಿಚಾರಣೆ ಮುಂದೂಡಲಾಯಿತು. ಇದೇ ವಿಷಯಕ್ಕೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಈ ಪ್ರಕರಣವನ್ನೂ ಜೋಡಿಸಿರುವುದರಿಂದ, ಸಹಕಾರಿ ಬ್ಯಾಂಕ್‌ಗಳ ಆಡಳಿತ ಮತ್ತು ನಿರ್ದೇಶಕರ ಅಧಿಕಾರಾವಧಿ ಕುರಿತ ಆರ್‌ಬಿಐ ನಿಯಮಾವಳಿಗಳ ವಿರುದ್ಧದ ಸವಾಲನ್ನು ಹೈಕೋರ್ಟ್ ಸಮಗ್ರವಾಗಿ ಪರಿಶೀಲಿಸುವ ಸಾಧ್ಯತೆ ಇದೆ. ಅರ್ಜಿದಾರ ಬ್ಯಾಂಕ್, 2025ರ ನವೆಂಬರ್ 28 ಹಾಗೂ 2026ರ ಮೇ 25ರಂದು ಆರ್‌ಬಿಐ ಹೊರಡಿಸಿರುವ ಸುತ್ತೋಲೆಗಳು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ನೀಡಿರುವ ಅಧಿಕಾರದ ಮಿತಿಯನ್ನು ಮೀರಿ ಹೊರಡಿಸಲಾಗಿದೆ ಎಂದು ವಾದಿಸಿದೆ.
ಸಹಕಾರಿ ಸಂಘಗಳ ಆಡಳಿತ, ನಿರ್ವಹಣೆ ಹಾಗೂ ನಿರ್ದೇಶಕರ ಅಧಿಕಾರಾವಧಿಗೆ ಸಂಬಂಧಿಸಿದ ವಿಷಯಗಳು ರಾಜ್ಯ ಪಟ್ಟಿಯ ಎಂಟ್ರಿ–32ರ ಅಡಿಯಲ್ಲಿ ರಾಜ್ಯಗಳ ಶಾಸನಾತ್ಮಕ ಅಧಿಕಾರ ವ್ಯಾಪ್ತಿಗೆ ಸೇರಿದ್ದು, ಕರ್ನಾಟಕದಲ್ಲಿ ಅವು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಮೂಲಕ ನಿಯಂತ್ರಿತವಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಆರ್‌ಬಿಐ ಸುತ್ತೋಲೆಗಳನ್ನು ರದ್ದುಗೊಳಿಸುವಂತೆ ಹಾಗೂ ಅವುಗಳ ಜಾರಿಯನ್ನು ತಾತ್ಕಾಲಿಕವಾಗಿ ತಡೆಯುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಈ ಹಿಂದೆ ಜೂನ್ 15ರಂದು ಹೈಕೋರ್ಟ್ ಕೇಂದ್ರ ಸರ್ಕಾರ, ಆರ್‌ಬಿಐ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆ ನಡೆಯುವವರೆಗೆ ಅರ್ಜಿದಾರ ಬ್ಯಾಂಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿತ್ತು. ಈ ಪ್ರಕರಣದ ಅಂತಿಮ ತೀರ್ಪು ಸಹಕಾರಿ ಬ್ಯಾಂಕ್‌ಗಳ ಆಡಳಿತ, ನಿರ್ದೇಶಕರ ಅಧಿಕಾರಾವಧಿ ಹಾಗೂ ಆರ್‌ಬಿಐ ನಿಯಂತ್ರಣಾಧಿಕಾರದ ವ್ಯಾಪ್ತಿಯ ಕುರಿತು ದೇಶಾದ್ಯಂತ ಮಹತ್ವದ ಮಾರ್ಗದರ್ಶಕ ತೀರ್ಪಾಗುವ ಸಾಧ್ಯತೆ ಇದೆ.


