ಬೆಳ್ಮಣ್: ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ ರೂ.10 ಕೋಟಿ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಮಹತ್ವದ ಸಾಧನೆಯನ್ನು ಶನಿವಾರ ಬೆಳ್ಮಣ್ ಶಾಖೆಯಲ್ಲಿ ಆಚರಿಸಲಾಯಿತು. ಒಂದು ವರ್ಷದ ಯಶಸ್ವಿ ಕಾರ್ಯ ಹಾಗೂ ರೂ. 10 ಕೋಟಿಯ ವ್ಯವಹಾರದ ಮೈಲಿಗಲ್ಲು ದಾಟಿದ ಸಾಧನೆಯನ್ನು ಸಂಕೇತಿಸುವಂತೆ ಸಂಸ್ಥೆಯ ಅಧ್ಯಕ್ಷರು, ಅತಿಥಿಗಳು, ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಬೆಳ್ಮಣ್ ಶಾಖೆಯ ಸ್ಥಾಪಕ ಗ್ರಾಹಕರು, ಶಾಖಾ ವ್ಯವಸ್ಥಾಪಕರು ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಹಂಚಿಕೊಂಡರು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಬೆಳ್ಮಣ್ ಶಾಖೆಯ ಆರಂಭದಿಂದಲೂ ಬ್ಯಾಂಕಿನ ಮೇಲೆ ಗ್ರಾಹಕರು ತೋರಿಸಿದ ವಿಶ್ವಾಸ, ನಂಬಿಕೆ ಮತ್ತು ಬೆಂಬಲವನ್ನು ಗೌರವಿಸಿ ಸ್ಥಾಪಕ ಗ್ರಾಹಕರನ್ನು ಸನ್ಮಾನಿಸಿ ಮಾತನಾಡಿ, ಮೊದಲ ವರ್ಷದೊಳಗೆ ಸಾಧಿಸಲಾದ ರೂ.10 ಕೋಟಿ ಮೈಲಿಗಲ್ಲು ಸಾಮೂಹಿಕ ಪ್ರಯತ್ನ, ದೂರದೃಷ್ಟಿಯ ಯೋಜನೆ ಮತ್ತು ಗ್ರಾಹಕರ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುವುದು ಬ್ಯಾಂಕಿನ ಪ್ರಾಥಮಿಕ ಉದ್ದೇಶ ಎಂದು ಹೇಳಿದರು. ಗ್ರಾಹಕರು ಬ್ಯಾಂಕಿನತ್ತ ಸಂಪೂರ್ಣ ನಂಬಿಕೆಯಿಂದ ಬರುವಂತಾಗಬೇಕು, ಇದಕ್ಕೆ ಪ್ರತಿಯಾಗಿ ಬ್ಯಾಂಕ್ ಅವರ ನಂಬಿಕೆಗೆ ತಕ್ಕ ಸೇವೆ ನೀಡಬೇಕು. ಅವರ ಅಗತ್ಯಗಳನ್ನು ಅರ್ಥ ಮಾಡಿಕೊಂಡು, ಸಮಸ್ಯೆಗಳನ್ನು ಪರಿಹರಿಸಿ, ಸಂಪೂರ್ಣ ತೃಪ್ತಿಯನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸಾರ್ಹ ಸೇವೆಯನ್ನು ಒದಗಿಸಬೇಕು. ಗ್ರಾಹಕರ ಬಲವಾದ ಬೆಂಬಲ ಮತ್ತು ನಂಬಿಕೆಯಿಂದ ಬೆಳ್ಮಣ್ ಶಾಖೆ ಹೊಸ ಮೈಲಿಗಲ್ಲು ಸಾಧಿಸಲು ಸಾಧ್ಯವಾಯಿತು. ಡಿಸೆಂಬರ್ ತಿಂಗಳಲ್ಲೇ ಶಾಖೆಯು ರೂ.10 ಕೋಟಿ ಗಡಿ ತಲುಪಿತ್ತು ಮತ್ತು ಈಗ ರೂ.12 ಕೋಟಿ ಮೈಲಿಗಲ್ಲು ದಾಟಿದೆ. ಈ ಸಾಧನೆಗಾಗಿ ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರನ್ನು ಅಭಿನಂದನೀಯ. ಶಾಖೆಯ ಗ್ರಾಹಕರು ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳು ಎಂದು ಬಣ್ಣಿಸಿದರು.
ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಯ ನಾಯಕತ್ವದಲ್ಲಿ ಎಂಸಿಸಿ ಬ್ಯಾಂಕ್ ತನ್ನ ಶಾಖೆಗಳನ್ನು 16ರಿಂದ 21ಕ್ಕೆ ವಿಸ್ತರಿಸಿದೆ. ಮುಂದೆ ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಜೊತೆಗೆ ಹೊನ್ನಾವರ ಮತ್ತು ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯುವ ಪ್ರಯತ್ನ ಜಾರಿಯಲ್ಲಿದ್ದು, ಈ ಮೂಲಕ ಶಾಖೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಹೆಚ್ಚುವರಿಯಾಗಿ 15 ಹೊಸ ಎಟಿಎಂಗಳನ್ನು ತೆರೆಯಲಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಯುಪಿಐ ಮತ್ತು ಗೂಗಲ್ ಪೇ ಸೇವೆಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು.


ಮುಖ್ಯ ಅತಿಥಿಯಾಗಿದ್ದ ಪರಪ್ಪಾಡಿಯ ಅವರ್ ಲೇಡಿ ಆಫ್ ಪರ್ಪೆಚುಯಲ್ ಸುಕುರ್ ಚರ್ಚ್ ಧರ್ಮಗುರು ವಂದನೀಯ ಫಾ| ಡೆನಿಸ್ ಡಿಸೋಜ ಮಾತನಾಡಿ ಬೆಳ್ಮಣ್ ಶಾಖೆಯು ಅಲ್ಪಾವಧಿಯಲ್ಲಿಯೇ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದರು. ಬ್ಯಾಂಕಿನ ನೈತಿಕ ಮೌಲ್ಯಗಳು, ಶಿಸ್ತುಬದ್ಧ ಆಡಳಿತ, ಪಾರದರ್ಶಕತೆ ಮತ್ತು ಸೇವಾ ಮನೋಭಾವದ ಮೂಲಕ ಬ್ಯಾಂಕ್ ಉತ್ತಮ ಸಾಧನೆ ಮಾಡುತ್ತಿದೆ. ಇತರ ಬ್ಯಾಂಕುಗಳು ಸಾಲ ಮಂಜೂರು ಮಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ, ಎಂಸಿಸಿ ಬ್ಯಾಂಕ್ ಸಹಾಯ ಮಾಡಲು ಮುಂದೆ ಬಂದಿತ್ತು ನೆನಪಿಸಿದರು. ಎಂಸಿಸಿ ಬ್ಯಾಂಕ್ ಪ್ರಸ್ತುತ ಖಾಸಗಿ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಪ್ರಸ್ತುತ ಅಧ್ಯಕ್ಷರ ನೇತೃತ್ವದಲ್ಲಿ ಗಮನಾರ್ಹ ಕಾರ್ಯಕ್ಷಮತೆ ತೋರಿಸಿದೆ. ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಶಕ್ತಿಶಾಲಿ ನಾಯಕತ್ವ ಅತ್ಯಗತ್ಯ. ಪ್ರಸ್ತುತ ಅಧ್ಯಕ್ಷರು ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಬೆಳ್ಮಣ್‌ನ ಸಂತ ಜೋಸೆಫರ ಪ್ರೌಢಶಾಲೆಯ ಶಿಕ್ಷಕಿ ಲೈಲಾ ಬಬಿತಾ ನೊರೊನ್ಹಾ ಮಾತನಾಡಿ, ಬ್ಯಾಂಕಿನ ವೃತ್ತಿಪರ ಮಾನದಂಡಗಳು ಮತ್ತು ಗ್ರಾಹಕ ಸ್ನೇಹಿ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಾಮಾನ್ಯವಾಗಿ ಒಂದು ಮಗು ತನ್ನ ಕಾಲ ಮೇಲೆ ನಿಲ್ಲಲು ಒಂದು ವರ್ಷ ತೆಗೆದುಕೊಳ್ಳುತ್ತದೆಯಾದರೂ, ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯು ತನ್ನ ಮೊದಲ ವರ್ಷದೊಳಗೆ ಓಡಲು ಪ್ರಾರಂಭಿಸಿದೆ ಎಂದು ಉಲ್ಲೇಖಿಸಿದರು. ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಎಂಸಿಸಿ ಬ್ಯಾಂಕ್ ಶಾಖೆಯು ಹೆಚ್ಚು ಗ್ರಾಹಕ ಸ್ನೇಹಿಯಾಗಿದೆ ಮತ್ತು ಗ್ರಾಹಕರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸುತ್ತದೆ. ಈ ವಿಧಾನವು ಮಹತ್ವದ ಮೈಲಿಗಲ್ಲು ಸಾಧಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಮತ್ತು ಬೆಳ್ಮಣ್ ಶಾಖಾ ಪ್ರಬಂಧಕಿ ಶೈನಿ ಲಸ್ರಾದೊ ಹಾಜರಿದ್ದರು. ಗ್ರಾಹಕರ ಮಕ್ಕಳು ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಶಾಖೆಯ ಗ್ರಾಹಕರನ್ನು ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆಗಳಿಗಾಗಿ ಎಂಸಿಸಿ ಬ್ಯಾಂಕಿನಿಂದ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಾದ ಜನೀಶ್ ಮೆನೆಜೆಸ್, ಪಿಷ್ಮಾ ಡಿಕ್ರೂಜ್, ರಿಯಾ ರಾಚೆಲ್ ರೊಡ್ರಿಗಸ್, ಮತ್ತು ಪರ್ಲ್ ಮಾರಿಸಾ ಕಾರ್ಡೋಜಾ, ಪಿಯುಸಿ ಸಾಧಕರಾದ ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್, ರೋಲಿಶಾ ಪ್ರಿಯಾ ಡಿಸಿಲ್ವ ಮತ್ತು ಜೋಸ್ವಿನ್ ಕ್ರಿಸ್ಟನ್ ಪೈಸ್ ಅಭಿನಂದನೆ ಸ್ವೀಕರಿಸಿದರು. ತಮ್ಮ 25ನೇ, 50ನೇ, 60ನೇ, 75 ಹಾಗೂ 80ನೇ ಜನ್ಮ ದಿನ ಆಚರಿಸಿದ ಶಾಖೆಯ 30 ಗ್ರಾಹಕರನ್ನು ಗೌರವಿಸಲಾಯಿತು. ನಿರ್ದೇಶಕಿ ಡಾ| ಫ್ರೀಡಾ ಡಿಸೋಜ ಸ್ವಾಗತಿಸಿ, ಜೇಸನ್ ಪಿರೇರ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

