ರಾಮನಗರದಲ್ಲಿ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ರಾಮನಗರ ತಾಲೂಕಿನ ಸಹಕಾರ ಭಾರತಿಯ ನೂತನ ತಾಲೂಕು ಪದಾಧಿಕಾರಿಗಳ ಘೋಷಣೆ ಮತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸೋಮವಾರ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾತನಾಡಿ, ರಾಜಕೀಯರಹಿತ, ಸರಕಾರೇತರ ಸ್ವಯಂಸೇವಾ ಸಂಸ್ಥೆಯಾಗಿರುವ ಸಹಕಾರ ಭಾರತಿ ಕಳೆದ 46 ವರ್ಷಗಳಲ್ಲಿ ದೇಶದ 28 ರಾಜ್ಯಗಳ 650 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಕಾರವಿಲ್ಲದೆ ಸಹಕಾರವಿಲ್ಲ ಮತ್ತು ಸಹಕಾರವಿಲ್ಲದೆ ಉದ್ಧಾರವಿಲ್ಲ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಹಕಾರ ಭಾರತಿಯು ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಂಘಟನಾತ್ಮಕವಾಗಿ, ರಚನಾತ್ಮಕವಾಗಿ, ಆಂದೋಲನಾತ್ಮಕವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ ನಾಲ್ಕು ಆಯಾಮಗಳಲ್ಲಿ ಸೇವೆ, ಸಂಪರ್ಕ ಮತ್ತು ಸಮರ್ಪಣಾ ಭಾವದಿಂದ ಕಾರ್ಯತತ್ಪರವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಮನಗರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೈ.ಎಚ್ ಮಂಜು ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಸಹಕಾರಿ ನೀತಿ ಮತ್ತು ಪ್ರತ್ಯೇಕ ಸಚಿವಾಲಯದ ರಚನೆಯ ಬಳಿಕ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ನಡೆಯುತ್ತಿದ್ದರೂ ಕೂಡ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು ಆಡಳಿತ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಪೂರಕವಾಗಿ ಸೌಹಾರ್ದಯುತವಾಗಿ ವ್ಯವಹರಿಸಿ ರೈತರ ಸಂಕಷ್ಟಗಳ ನಿವಾರಣೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಸಹಕಾರ ಭಾರತಿಯು ಸಹಕಾರಿ ಕ್ಷೇತ್ರ ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ಸರಕಾರ ಮತ್ತು ಇಲಾಖಾ ಮಟ್ಟದಲ್ಲಿ ಬಗೆಹರಿಸಲು ಇನ್ನಷ್ಟು ಹೆಚ್ಚಿನ ಆಸಕ್ತಿ ಮತ್ತು ಶ್ರಮ ವಹಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ವೈ.ಎಸ್ ಶಂಕರಮೂರ್ತಿಯವರು, ರಾಮನಗರ ತಾಲೂಕಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿ, ಶುಭ ಹಾರೈಸಿದರು. ಸಹಕಾರ ಭಾರತಿ ರಾಮನಗರ ತಾಲೂಕಿನ ನೂತನ ಅಧ್ಯಕ್ಷ ಕೆ.ಎನ್.ಶ್ರೀಧರ್ ಮಾತನಾಡಿ, ರಾಮನಗರ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಪುನಶ್ಚೇತನಕ್ಕಾಗಿ ಸಹಕಾರ ಭಾರತಿ ತಾಲೂಕು ಘಟಕವು ಪ್ರತಿ ತಿಂಗಳು ಸಭೆ ನಡೆಸಿ, ಜಿಲ್ಲೆ ಮತ್ತು ರಾಜ್ಯ ಪದಾಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಜೊತೆಗೆ ಸಮಾಜಮುಖಿ ಕಾರ್ಯ ಯೋಜನೆಗಳನ್ನು ರೂಪಿಸಲಿದೆ ಎಂದು ತಿಳಿಸಿದರು.
ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷರಾದ ನಾಗಮಣಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ವಶಿಷ್ಠ, ಕೋಶಾಧಿಕಾರಿ ನಾ.ಶ್ರೀಧರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬ್ರಿಜೇಶ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿ, ಉಪಾಧ್ಯಕ್ಷರಾದ ತಿಮ್ಮರಾಯ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಮನಗರ ತಾಲೂಕಿನ ಕುರುಬರಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನಂದೀಶ್ ರವರು ಕಾರ್ಯಕ್ರಮ ಸಂಯೋಜಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



