ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ವಕೀಲರಾದ ಮೋನಪ್ಪ ಭಂಡಾರಿ ಅಭಿಪ್ರಾಯ
ಮಂಗಳೂರು: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತನ್ನ ಸ್ಥಾಪನಾ ದಿನದ ಅಂಗವಾಗಿ ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕೆಲಸ. ತಮ್ಮ ಸಾಮಾಜಿಕ ಕೆಲಸದ ನಿಟ್ಟಿನಲ್ಲಿ ಶ್ರೀ ಪೂರ್ಣಾನಂದ ಸಹಕಾರಿ ಸಂಘವು ವೈದ್ಯಕೀಯ ಶಿಬಿರ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ವಕೀಲರಾದ ಮೋನಪ್ಪ ಭಂಡಾರಿ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಹಂಪನಕಟ್ಟೆಯ ಮಿನಿ ವಿಧಾನಸೌಧ ಸಮೀಪದ ಎನ್‌ಜಿಒ ಕಟ್ಟಡದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ಶಿಬಿರ ಹಾಗೂ ಅಂಚೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂಚೆ ಅಪಘಾತ ಮತ್ತು ಆರೋಗ್ಯ ವಿಮೆ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ದಿನವು ಶುಭದಿನವಾಗಿದ್ದು ದೇಶದ ಪ್ರಥಮ ರಾಷ್ಟ್ರಗೀತೆಯಾದ ವಂದೇ ಮಾತರಂ ಗೀತೆ ಗಾಯನಕ್ಕೆ 150 ವರ್ಷಗಳು ಆಗಿರುವ ದಿನವಿದಾಗಿದೆ. ಇದರ ಸವಿನೆನಪಿನಲ್ಲಿ 150 ಜಿಲ್ಲೆಗಳಲ್ಲಿ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ನಡೆಯುತ್ತಿದೆ. ಅದರ ಸವಿನೆನಪಿನ ಜೊತೆಗೆ ಇಲ್ಲಿ ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ರಮಕ್ಕೂ ವಿಶೇಷ ಮಹತ್ವವಿದೆ. ಪೂರ್ಣಾನಂದ ಸಹಕಾರಿ ಸಂಘವು 23-24 ವರ್ಷಗಳಿಂದ ಸಾವರ್ಜನಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಗ್ರಾಹಕರಿಗೆ ಉತ್ತಮ ಬಡ್ಡಿದರವನ್ನೂ ನೀಡುತ್ತಿದೆ. ತಮ್ಮ ಗ್ರಾಹಕರಿಗೆ ಉಪಯೋಗಕರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ವೈದ್ಯಕೀಯ ಶಿಬಿರವು ಈಗಿನ ಕಾಲಘಟ್ಟದಲ್ಲಿ ಬಹೂಪಯೋಗಿ ಕಾರ್ಯಕ್ರಮ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ, ಸಂಘವು 23 ವರ್ಷಗಳನ್ನು ಪೂರೈಸಿ 24ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭ ವೈದ್ಯಕೀಯ ಶಿಬಿರ ಆಯೋಜಿಸಲಾಗುತ್ತಿದೆ. ಕೆಎಂಸಿಯ ಆರೋಗ್ಯ ಕಾರ್ಡ್, ಲಾಯಲ್ಟಿ ಕಾರ್ಡ್, ಡಿಸ್ಕೌಂಟ್ ಕಾರ್ಡ್ ನೀಡುವುದರ ಜೊತೆಗೆ ಸದಸ್ಯರಿಗೆ ಕೆಎಂಸಿಯ ಸೇವೆಗಳನ್ನೂ ನೀಡಲಾಗುತ್ತಿದೆ. ಎಲ್ಲರೂ ಆರೋಗ್ಯ ಕಾರ್ಡ್‌ಗಳ ಉಪಯೋಗ ಪಡೆದುಕೊಳ್ಳಬೇಕು. ಅದರ ಜೊತೆಗೆ ಅಂಚೆ ಇಲಾಖೆಯು ನೀಡುತ್ತಿರುವ ಸೇವೆಗಳ ಮಾಹಿತಿಯನ್ನೂ ಪಡೆದುಕೊಂಡು ಆ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ಉಪೇಂದ್ರ ನಾಯಕ್, ಪ್ರಧಾನ ವ್ಯವಸ್ಥಾಪಕರಾದ ಅನಿತಾ, ಕೆಎಂಸಿಯ ವೈದ್ಯಾಧಿಕಾರಿ(ಕಣ್ಣಿನ ವಿಭಾಗ) ಡಾ.ಪಲ್ಲವಿ, ಮೆಡಿಸಿನ್ ವಿಭಾಗದ ಡಾ.ಅವಂತಿಕಾ, ಅಂಚೆ ಕಚೇರಿ ಅಭಿವೃದ್ಧಿ ಅಧಿಕಾರಿ ಯತಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ದೇವರ ಸ್ತುತಿ ಮಾಡಿದರು. ಸಂಸ್ಥೆಯ ಸಿಬ್ಬಂದಿ ಸುಜಾತಾ ಸ್ವಾಗತಿಸಿದರು. ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಹೃಷಿಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ವಂದಿಸಿದರು.
ಅಂಚೆ ಇಲಾಖೆಯ ಆರೋಗ್ಯ ಟಾಪ್ ಅಪ್ ವಿಮಾ ಯೋಜನೆ
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಆಯೋಜಿಸಿರುವ ಆರೋಗ್ಯ ಶಿಬಿರದ ಜೊತೆಗೆ ಅಂಚೆ ಇಲಾಖೆಯ ಆರೋಗ್ಯ ವಿಮೆಯ ಸೌಲಭ್ಯವನ್ನೂ ನೀಡಲಾಗುತ್ತಿದೆ. ಕೇವಲ 756 ರೂ. ಪಾವತಿಸಿ ಅಂಚೆ ವಿಮೆ ಮಾಡಿದರೆ 15 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯ ದೊರೆಯುತ್ತದೆ. ಇದು ಅಂಚೆ ಇಲಾಖೆಯ ಒಂದು ಹೊಸ ಆರೋಗ್ಯ ಟಾಪ್–ಅಪ್ ವಿಮಾ ಯೋಜನೆಯಾಗಿದೆ. ಇದರಲ್ಲಿ, ಮೊದಲ ₹2 ಲಕ್ಷದವರೆಗೆ ವಿಮೆ ಪಡೆದವರೇ ಭರಿಸಬೇಕಾಗುತ್ತದೆ. ನಂತರ, ಆ ₹2 ಲಕ್ಷದ ಮೇಲೆ ₹15 ಲಕ್ಷದವರೆಗೆ ನಗದು ರಹಿತ (cashless) ಚಿಕಿತ್ಸೆ ಪಡೆಯಲು ವಿಮೆಯು ನೆರವಾಗುತ್ತದೆ.
-
ಯೋಜನೆಯ ವಿವರಗಳು:
-
ಒಂದು ವರ್ಷಕ್ಕೆ ₹756 ಪ್ರೀಮಿಯಂ:ಒಬ್ಬ ವ್ಯಕ್ತಿಗೆ ಈ ಪ್ರೀಮಿಯಂ ಅನ್ವಯಿಸುತ್ತದೆ. ₹15 ಲಕ್ಷದವರೆಗೆ ವಿಮಾ ಮೊತ್ತ: ಇದು ಗರಿಷ್ಠ ವಿಮಾ ಮೊತ್ತವಾಗಿದೆ. ಆದರೆ, ಇದರ ಉಪಯೋಗಕ್ಕಾಗಿ ಮೊದಲ ₹2 ಲಕ್ಷವನ್ನು ವ್ಯಕ್ತಿಯೇ ಭರಿಸಬೇಕು.
-
ಕುಟುಂಬ ಯೋಜನೆ:ಒಂದು ಕುಟುಂಬದ ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳಿಗೆ ₹1956 ಪ್ರೀಮಿಯಂನಲ್ಲಿ ವಿಮೆ ಪಡೆಯಬಹುದು. ಇದೂ ಕೂಡ ₹2 ಲಕ್ಷದವರೆಗೆ ವ್ಯಕ್ತಿಯೇ ಭರಿಸಬೇಕಾಗುತ್ತದೆ.
-
ಅನುಕೂಲಗಳು:ಈ ಯೋಜನೆಯು ಎಲ್ಲಾ ರೀತಿಯ ಚಿಕಿತ್ಸೆಗಳಿಗೆ ಅನ್ವಯಿಸುತ್ತದೆ. ಆದರೆ, ಪೂರ್ವ-ಇರುವ ಕಾಯಿಲೆಗಳಿಗೆ (pre-existing diseases) ಎರಡು ವರ್ಷಗಳ ಲಾಕಿಂಗ್ ಅವಧಿ ಇರುತ್ತದೆ.
-
ಆಸ್ಪತ್ರೆ ವಿವರಗಳು:ಚಿಕಿತ್ಸೆ ಪಡೆಯಲು ಲಭ್ಯವಿರುವ ಆಸ್ಪತ್ರೆಗಳ ವಿವರಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.
-
ಖಾತೆ:ಈ ಯೋಜನೆಯನ್ನು ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಹೊಂದಿರಬೇಕು. ಖಾತೆ ಇಲ್ಲದಿದ್ದರೆ, ₹100 ಪಾವತಿಸಿ ತೆರೆಯಬಹುದು.
-

