ನಿರಂತರ ಅಭಿವೃದ್ಧಿ ಪಥದಲ್ಲಿ ಮುನ್ನಡೆ: ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿಕೆ
ಉಳ್ಳಾಲ: ದ.ಕ. ಜಿಲ್ಲೆಯ ಪ್ರತಿಷ್ಠಿತ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 952 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು 1.24 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಸಂಘವು ನಿರಂತರ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರು, ಗ್ರಾಹಕರು, ಹಿತೈಷಿಗಳು ಹಾಗೂ ಸಿಬ್ಬಂದಿಗಳ ಅವಿರತ ಸೇವೆಯಿಂದಾಗಿ ಸಂಘವು ನಿರಂತರವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ‘ಎ’ ತರಗತಿಯ 6,665 ಸದಸ್ಯರನ್ನು ಹೊಂದಿದ್ದು 2.63 ಕೋಟಿ ರೂ. ಗಳ ಪಾಲು ಬಂಡವಾಳವನ್ನು ಹೊಂದಿದೆ. 444 ಕೋಟಿ ರೂ. ಠೇವಣಿ ಸಂಗ್ರಹಿಸಿ 424 ಕೋಟಿ ರೂ. ಠೇವಣಿ ಪಾವತಿಸಿ ವರ್ಷಾಂತ್ಯಕ್ಕೆ 185 ಕೋಟಿ ಠೇವಣಿ ಹೊಂದಿದೆ. ಕಳೆದ ವರ್ಷಾಂತ್ಯಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ 21 ಕೋಟಿ ರೂ.ಗಳ ಪ್ರಗತಿ ಸಾಧಿಸಲಾಗಿದೆ. ಈ ಸಾಲಿನಲ್ಲಿ 240 ಕೋಟಿ ರೂ. ಸಾಲ ವಿತರಿಸಿದ್ದು 216 ಕೋಟಿ ರೂ. ಸಾಲ ವಸೂಲಾಗಿದೆ. ವರ್ಷಾಂತ್ಯಕ್ಕೆ 147 ಕೋಟಿ ರೂ. ಹೊರಬಾಕಿ ಸಾಲವಿದ್ದು ಸಾಲ ವಸೂಲಾತಿಯಲ್ಲಿ ಶೇ.95 ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಗರಿಮೆ
2024-25ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅತ್ಯುತ್ತಮ ಕಾರ್ಯ ಸಾಧನೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ಪ್ರಶಸ್ತಿಯನ್ನು ಸಂಘವು ಪಡೆದುಕೊಂಡಿದೆ ಎಂದು ಕೃಷ್ಣ ಶೆಟ್ಟಿ ಹೇಳಿದರು.
ಸಮಾಜಮುಖಿ ಚಟುವಟಿಕೆಗಳು:
ಅಡಕೆ ಬೆಳೆಗಾರರಿಗೆ ಮೈಲುತುತ್ತಿಗೆ ಪ್ರತಿ ಒಂದು ಕೆಜಿಯ ಮೇಲೆ 100 ರೂ. ಸಹಾಯಧನವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 443 ರೈತರಿಗೆ 3,08,456 ರೂ. ಸಬ್ಸಿಡಿ ನೀಡಲಾಗಿದೆ. ಪಿಲಾರು ಸರಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ, ಬ್ಯಾಗ್, ಲೇಖನ ಸಾಮಗ್ರಿ ಹಾಗೂ ಕೊಡೆಗಳನ್ನು ವಿತರಿಸಲಾಗಿದೆ. ಸಂಘದ ಸದಸ್ಯರಾಗಿರುವ ರೈತರಿಗೆ ಭತ್ತ ಕೃಷಿಗೆ ಎಕ್ರೆಗೆ 5,000 ರೂ.ನಂತೆ 96 ಭತ್ತ ಕೃಷಿಕರಿಗೆ 4,86,500 ರೂ. ಸಹಾಯಧನ ನೀಡಲಾಗಿದೆ. ಸಂಘದ ಕಾರ್ಯವ್ಯಾಪ್ತಿಯ ಪ್ರೌಢಶಾಲೆಗಳಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 41 ವಿದ್ಯಾರ್ಥಿಗಳಿಗೆ ತಲಾ 3,000 ರೂ.ನಂತೆ ಪ್ರೋತ್ಸಾಹಧನ ನೀಡಲಾಗಿದೆ ಎಂದು ಕೃಷ್ಣ ಶೆಟ್ಟಿಯವರು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷರಾದ ಅಬುಸಾಲಿ ಕಿನ್ಯಾ, ನಿರ್ದೇಶಕರಾದ ಗಂಗಾಧರ ಯು., ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು., ರಾಘವ ಆರ್.ಉಚ್ಚಿಲ್, ರಾಘವ ಸಿ.ಉಚ್ಚಿಲ್, ಸುರೇಖಾ ಚಂದ್ರಹಾಸ, ಸುನೀತಾ ಲೋಬೊ, ಬಾಬು ನಾಯ್ಕ, ಕೃಷ್ಣಪ್ಪ, ಸಂಘದ ಸಿಇಒ ಹರ್ಷವರ್ಧನ ಉಳ್ಳಾಲ್ ಸುದ್ದಿಗೋಷ್ಠಿಯಲ್ಲಿದ್ದರು.
ಸಂಘದ ಆಡಿಟ್ ವರ್ಗೀಕರಣದಲ್ಲಿ ನಿರಂತರ ಎ ತರಗತಿ ಪಡೆದಿದ್ದೇವೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ 46 ಕೋಟಿ ರೂ. ಠೇವಣಿಯಾಗಿ ವಿನಿಯೋಗಿಸಲಾಗಿದೆ. 11 ಕೋಟಿ ರೂ.ಗಳ ವಿವಿಧ ರೀತಿಯ ನಿಧಿಯನ್ನು ಸಂಘವು ಹೊಂದಿದೆ. ತನ್ನ ಷೇರುದಾರರಿಗೆ ಶೇ.15 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದರ ಮಂಜೂರಾತಿಗಾಗಿ ಮಹಾಸಭೆಯಲ್ಲಿ ಮಂಡಿಸಲಾಗುವುದು.
ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು
ಅಧ್ಯಕ್ಷರು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









