ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 2024-25ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯು ಭಾನುವಾರ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.2.75 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ಘೋಷಣೆ ಮಾಡಲಾಯಿತು.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಇವರು ಸ್ವಾಗತಿಸಿ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸುತ್ತಾ, ಗತ ಸಾಲಿನಲ್ಲಿ ದೈವಾಧೀನರಾದಂತಹ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ.ಲಿಗೋರಿ ಲೋಬೊ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಸಂತಾಪ ಸೂಚಿಸಿದರು.

ಸಂಘವು ಪ್ರಸಕ್ತ ವರ್ಷದಲ್ಲಿ ರೂ.930.71 ಕೋಟಿ ವ್ಯವಹಾರ ನಡೆಸಿ, ಮಾರ್ಚ್ ಅಂತ್ಯಕ್ಕೆ ರೂ.3.87 ಕೋಟಿ ಪಾಲು ಬಂಡವಾಳ, ರೂ.121.69 ಕೋಟಿ ಠೇವಣಿ, ರೂ. 110.78 ಕೋಟಿ ಸದಸ್ಯರ ಹೊರಬಾಕಿ ಸಾಲದೊಂದಿಗೆ, ಸಂಘದ ದುಡಿಯುವ ಬಂಡವಾಳ ರೂ .134.60 ಕೋಟಿ ಆಗಿದ್ದು, ಪ್ರತಿವರ್ಷ ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಶ್ರೇಣಿ ಪಡೆದಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಸಾಧನೆಗೈದ ಯುವ ಪ್ರತಿಭೆಗಳು ಹಾಗೂ ಶಿಕ್ಷಕರನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಸೆಲಿನ್ ಗ್ರೇಸಿ ಡಿಸೋಜ ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ಡೆಲ್ಸನ್ ರೊಡ್ರಿಗಸ್ ಕಾರ್ಯಕ್ರಮ, ನಿರೂಪಿಸಿ ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ ವಂದನಾರ್ಪಣೆಗೈದರು. ನಿರ್ದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್ , ಗ್ಲೋರಿಯ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ , ಲಾರೆನ್ಸ್ ಕ್ಲಿಫರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ , ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ಡಾನ್ಹ, ವಿಶಾಲ್ ಡಿಸೋಜ ಸಭೆಯಲ್ಲಿ ಉಪಸ್ಥಿತರಿದ್ದರು.

