ಕಲ್ಲಡ್ಕ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ ಕಲ್ಲಡ್ಕ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ರೂ. 486 ಕೋಟಿ ವ್ಯವಹಾರ ನಡೆಸಿ ಆಡಿಟ್ ವರ್ಗೀಕರಣದಲ್ಲಿ “ಎ” ಗ್ರೇಡ್ ಹೊಂದಿ ರೂ.1,55,11,828.70 ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ಕೆ.ಪದ್ಮನಾಭ ಕೊಟ್ಟಾರಿ ಪ್ರಕಟಿಸಿದರು. ಸಂಘವು 2024-2025ನೇ ಆರ್ಥಿಕ ವರ್ಷದಲ್ಲಿ 1495 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 24.11 ಕೋಟಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಸಾಲ ವಿತರಿಸಿದೆ. 164 ಸದಸ್ಯರಿಗೆ 3% ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿಗಾಗಿ ರೂ. 4.97 ಕೋಟಿ ಸಾಲ, ಪಶುಗಳ ದೈನಂದಿನ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ಸಾಲ, 18 ಸದಸ್ಯರಿಗೆ ರೂ. 1.50 ಕೋಟಿ ಗೃಹ ನಿರ್ಮಾಣ ಸಾಲ ವಿತರಿಸಿದೆ. ಪ್ರಸ್ತುತ ಸಂಘದಲ್ಲಿ ವಿವಿಧ ಉದ್ದೇಶಗಳಿಗಾಗಿ ಹಾಗೂ ಇತರ ಸಾಲವಾಗಿ 8,796 ಸದಸ್ಯರಿಗೆ 81 ಕೋಟಿ ರೂ. ಸಾಲ ವಿತರಿಸಿದೆ. ಹವಾಮಾನ ಆಧಾರಿತ ಬೆಳೆವಿಮೆ 1,543 ಸದಸ್ಯರಿಗೆ 57.50 ಲಕ್ಷ ರೂ. ಸಂಘದಿಂದ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ವ್ಯವಹಾರ ಹಾಗೂ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಕ್ಕಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2015ರಿಂದ ಸತತವಾಗಿ 11 ವರ್ಷ ಉತ್ತಮ ಸಹಕಾರ ಸಂಘವೆಂದು ಗುರುತಿಸಿ, ಸನ್ಮಾನ, ಪ್ರಶಸ್ತಿ ಹಾಗೂ ಫಲಕ ನೀಡಿ ಗೌರವಿಸಿದೆ. ಸಂಘದ ಕಾರ್ಯವ್ಯಾಪ್ತಿಯು ಗೋಳ್ತಮಜಲು, ಅಮ್ಟೂರು, ಬಾಳ್ತಿಲ, ವೀರಕಂಭ, ಬೋಳಂತೂರು ಹೀಗೆ ಐದು ಗ್ರಾಮಗಳನ್ನೊಳಗೊಂಡಿದೆ. ಕಲ್ಲಡ್ಕ, ವೀರಕಂಭ, ಬೋಳಂತೂರು ಮತ್ತು ಅಮ್ಟೂರುಗಳಲ್ಲಿ ಶಾಖೆಗಳಿವೆ. ಸಂಘವು ತನ್ನ ಕಾರ್ಯವ್ಯಾಪ್ತಿಯ ಅರ್ಹ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಎಂ.ಕೆ.ಸಿ.ಸಿ. ಸಾಲ ಹಾಗೂ ಹಸು ಘಟಕ ನಿರ್ವಹಣೆಗಾಗಿ ಸಾಲ, ಕೃಷಿ ಅಭಿವೃದ್ಧಿಗಾಗಿ 3% ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ಹಾಗೂ ಇನ್ನಿತರ ಸಾಲಗಳನ್ನು ನೀಡುತ್ತಿದೆ. ಪಡಿತರ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿ ಮುಖಾಂತರ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದೆ. ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ವಾರದಲ್ಲಿ ರಜಾದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಕೆ ಖರೀದಿಸಲಾಗುತ್ತಿದೆ. ಅಡಕೆ ಬೆಳೆಗಾರ ಸದಸ್ಯರು ಸಂಘದ ಮುಖಾಂತರ ಕ್ಯಾಂಪ್ಕೋ ಸಂಸ್ಥೆಗೆ ಅಡಕೆ ಮಾರಾಟ ಮಾಡಿ ಮುಂದೆಯೂ ಇದರ ಸದುಪಯೋಗ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಪದ್ಮನಾಭ ಕೊಟ್ಟಾರಿ ತಿಳಿಸಿದರು. ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದ್ದು ಅದರಂತೆ ಕಾರ್ಯವ್ಯಾಪ್ತಿಯ ಗ್ರಾಮಸ್ಥರನ್ನು ಸದಸ್ಯರನ್ನಾಗಿ ನೋಂದಾಯಿಸಿ, ಜನಸಾಮಾನ್ಯರ ಆರ್ಥಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.




ಎಂ.ಕಾಂ ಹಾಗೂ ಎಂ.ಬಿ.ಎ.ಯಲ್ಲಿ ರ‍್ಯಾಂಕ್ ವಿಜೇತರಾದ ವಾಣಿಶ್ರೀ, ಲಿಖಿತಾ ಜಿ.ಎನ್, ಹಾಗೂ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಸೃಜನಾತ್ಮಕ ವೇದಿಕೆ ಮೂಲಕ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಾದ ಜಗನ್ ಹಾಗೂ ಶಿವನ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣ ಪಡೆಯುವ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ನಿರ್ದೇಶಕರಾದ ಚಂದ್ರಶೇಖರ ಟೈಲರ್, ಮಹಾಬಲ ಸಾಲ್ಯಾನ್, ಸುರೇಶ್ ಶೆಟ್ಟಿ, ಕೊರಗಪ್ಪ ಗೌಡ, ಪ್ರಭಾಕರ ಶೆಟ್ಟಿ ಬಿ.ಎನ್, ಜಯರಾಮ ರೈ, ವಿಜಯಪ್ರಕಾಶ, ಅಜಿತ್ ಎಂ., ಕೊರಗಪ್ಪ ನಾಯ್ಕ, ನೋಣಯ್ಯ ಎಂ.ಆರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಕೆ. ವಾರ್ಷಿಕ ವರದಿ ವಾಚಿಸಿದರು. ನಂದನ್ ರೈ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಂಘದ ಸಿಬ್ಬಂದಿಗಳಾದ ವನಿತಾ, ಚಿದಾನಂದ ಅಮೀನ್, ಪ್ರಮಿತ್ ಶೆಟ್ಟಿ ಕೆ.ದಿನೇಶ್, ಯೋಗೀಶ್ ಎಸ್, ಪವಿತ್ರ, ರಾಜೇಶ್ ಕೆ.ಓಬಯ್ಯ,ಮೋಹನ್, ಸೇಸಪ್ಪ ಸಹಕಾರ ನೀಡಿದರು. ಉಪಾಧ್ಯಕ್ಷ ಲೋಕಾನಂದ ಅವರು ಸ್ವಾಗತಿಸಿ, ನಿರ್ದೇಶಕಿ ಅರುಣಾ ವಿ.ಭಟ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

