7,768 ಹೊಸ ಪಿಎಸಿಎಸ್‌ಗಳು ಆರಂಭ: ರಾಷ್ಟ್ರೀಯ ಸಹಕಾರಿ ಡೇಟಾಬೇಸ್‌ನ ಮಾಹಿತಿ
ನವದೆಹಲಿ: ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾದ ಬಳಿಕ ದೇಶಾದ್ಯಂತ ಸಹಕಾರ ಸಂಘಗಳು ಬಲವರ್ಧನೆಗೊಳ್ಳುತ್ತಿದ್ದು, ಹೊಸದಾಗಿ ಆಂಭವಾಗುತ್ತಿರುವ ಸಹಕಾರ ಸಂಘಗಳ ಸಂಖ್ಯೆಯಲ್ಲೂ ಹೆಚ್ಚಳವಾಗತೊಡಗಿದೆ. ಸಹಕಾರ ಸಂಘಗಳ ತ್ವರಿತಗತಿಯ ಚಲನೆ ಕುರಿತ ಅಂಕಿ ಅಂಶವೊಂದರ ಪ್ರಕಾರ ದೇಶದ 93% ಗ್ರಾಮ ಪಂಚಾಯತ್‌ಗಳಲ್ಲಿ ಸಹಕಾರ ಸಂಘಗಳು ಅದರಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವ್ಯಾಪಿಸಿವೆ.
https://chat.whatsapp.com/EbVKVnWB6rlHT1mWtsgbch
ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (ಎನ್‌ಸಿಡಿ) ಪ್ರಕಾರ ಭಾರತದ ಗ್ರಾಮೀಣ ಸಹಕಾರಿ ಸಾಲ ರಚನೆಯ ಬೆನ್ನೆಲುಬಾಗಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್), ಈಗ ದೇಶದ 93%ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳಿಗೆ ವ್ಯಾಪಿಸಿವೆ. 2025ರ ಜೂನ್ 30ರ ಅಂಕಿ ಅಂಶಗಳ ಪ್ರಕಾರ ದೇಶದ 2,69,230 ಗ್ರಾಮ ಪಂಚಾಯತ್‌ಗಳ ಪೈಕಿ 2,51,872 ಪ್ಯಾಕ್ಸ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ)ಗಳು ಕಾರ್ಯನಿರ್ವಹಿಸುತ್ತಿವೆ. 17,358 ಗ್ರಾಮ ಪಂಚಾಯತ್‌ಗಳ ಮಾಹಿತಿ ಇನ್ನಷ್ಟೇ ದೃಢಪಡಬೇಕಿದೆ ಎಂದು ಸಂಸತ್ ಅಧಿವೇಶನದಲ್ಲಿ ಸಹಕಾರ ಸಚಿವ ಅಮಿತ್ ಷಾ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ಕೇವಲ ಪ್ಯಾಕ್ಸ್‌ಗಳ ಬಲವರ್ಧನೆಗಷ್ಟೇ ಗಮನ ಹರಿಸುತ್ತಿಲ್ಲ, ಇತರ ವಲಯಗಳ ಅಭಿವೃಧ್ಧಿಗೂ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯದ ಮೂಲಕ ಪ್ರಯತ್ನ ಮಾಡುತ್ತಿದೆ. ಎನ್‌ಸಿಡಿಯ ಅಂಕಿ ಆಂಶಗಳು ಈ ಬಗ್ಗೆಯೂ ಬೆಳಕು ಚೆಲ್ಲಿದೆ ಎಂದು ಹೇಳಿದ ಅಮತ್ ಷಾ, ಪ್ರಸಕ್ತ ಲೆಕ್ಕಾಚಾರದ ಪ್ರಕಾರ 1,84,387 ಗ್ರಾಮ ಪಂಚಾಯತ್‌ಗಳಲ್ಲಿ ಡೈರಿ ಸಹಕಾರ ಸಂಘಗಳು ಇನ್ನೂ ಸ್ಥಾಪನೆಯಾಗಿಲ್ಲ. 2,69,230 ಗ್ರಾಮ ಪಂಚಾಯತ್‌ಗಳ ಪೈಕಿ 2,39,710 ಗ್ರಾಮ ಪಂಚಾಯತ್‌ಗಳು ಮೀನುಗಾರಿಕೆ ಸಹಕಾರ ಸಂಘಗಳನ್ನು ಹೊಂದಿಲ್ಲ ಎಂಬುದನ್ನೂ ಬೊಟ್ಟು ಮಾಡಿದರು. ಈ ಮಾಹಿತಿ ಆಧರಿಸಿಯೇ ಕೇಂದ್ರ ಸರ್ಕಾರವು 2023ರ ಫೆಬ್ರವರಿಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಮತ್ತು ಗ್ರಾಮವನ್ನು ತಲುಪಲು ಪ್ಯಾಕ್ಸ್, ಡೈರಿ ಮತ್ತು ಮೀನುಗಾರಿಕೆ ಸಹಕಾರ ಸಂಘಗಳನ್ನು ಒಳಗೊಂಡಂತೆ ಎರಡು ಲಕ್ಷ ಬಹೂಪಯೋಗಿ ಸಹಕಾರ ಸಂಘಗಳನ್ನು ಸ್ಥಾಪಿಸುವ ಯೋಜನೆಯನ್ನು ಅನುಮೋದಿಸಿತ್ತು ಎಂದು ಅಮಿತ್ ಷಾ ಹೇಳಿದರು.


2021ರಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 7,768 ಹೊಸ ಪ್ಯಾಕ್ಸ್‌ಗಳನ್ನು ಸ್ಥಾಪಿಸಲಾಗಿದೆ. ರಾಜಸ್ಥಾನವು ಈ ನಾಲ್ಕೂವರೆ ವರ್ಷಗಳಲ್ಲಿ ರಾಜಸ್ಥಾನದಲ್ಲಿ 1,968 ಹೊಸ ಪ್ಯಾಕ್ಸ್‌ಗಳ ರಚನೆಯಾಗಿದ್ದು ಮೊದಲ ಸ್ಥಾನದಲ್ಲಿದೆ. ಒಡಿಶಾ (1,540), ಗುಜರಾತ್ (641), ಉತ್ತರ ಪ್ರದೇಶ (552), ಮತ್ತು ಉತ್ತರಾಖಂಡ (550) ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಪ್ಯಾಕ್ಸ್‌ಗಳ ರಚನೆಯಲ್ಲಿ ಈಶಾನ್ಯ ರಾಜ್ಯಗಳಲ್ಲೂ ಗಮನಾರ್ಹ ಪ್ರಗತಿಯಾಗಿದ್ದು, ಮೇಘಾಲಯ (276), ಅಸ್ಸಾಂ (254), ಅರುಣಾಚಲ ಪ್ರದೇಶ (127), ಮತ್ತು ತ್ರಿಪುರ (202)ಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಕೆಲವು ಪ್ರದೇಶಗಳು ಸೀಮಿತ ಪ್ರಗತಿ ಕಂಡುಕೊಂಡಿವೆ. ಈ ನಾಲ್ಕೂವರೆ ವರ್ಷಗಳಲ್ಲಿ ಕೇರಳದಲ್ಲಿ ಕೇವಲ ಹೊಸ ಮೂರು ಪ್ಯಾಕ್ಸ್‌ಗಳಷ್ಟೇ ರಚನೆಯಾಗಿವೆ. ಪಂಜಾಬ್ ಒಂಬತ್ತು ಮತ್ತು ತೆಲಂಗಾಣದಲ್ಲಿ ಒಂಬತ್ತು ಹೊಸ ಪ್ಯಾಕ್ಸ್‌ಗಳ ಲೆಕ್ಕ ತೋರಿಸಿದ್ದು, ಚಂಡೀಗಢ, ಲಕ್ಷದ್ವೀಪ ಮತ್ತು ದೆಹಲಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ಯಾಕ್ಸ್‌ಗಳ ಆರಂಭದ ಬಗ್ಗೆ ಪ್ರಗತಿ ದಾಖಲಾಗಿಲ್ಲ ಎಂದು ಎನ್‌ಸಿಡಿ ಮಾಹಿತಿಗಳು ಬಹಿರಂಗಪಡಿಸಿವೆ ಎಂದು ಸಹಕಾರ ಸಚಿವರು ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



