ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಸಹಕಾರಿ ಪುನರುಜ್ಜೀವನ ಪ್ರಕ್ರಿಯೆ: ಲೋಕಸಭೆಯಲ್ಲಿ ಸಚಿವ ಅಮಿತ್ ಷಾ ಮಾಹಿತಿ
ನವದೆಹಲಿ: ದೇಶಾದ್ಯಂತ ಬೃಹತ್ ಮಟ್ಟದಲ್ಲಿ ಸಹಕಾರಿ ಪುನರುಜ್ಜೀವನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಭಾಗವಾಗಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಎಲ್ಲ ಗ್ರಾಮ ಮತ್ತು ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಹಕಾರಿ ಸಂಘಗಳ ರಚನೆಯಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಲೋಕಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಸಹಕಾರಿ ಚಳವಳಿಯನ್ನು ಬಲಪಡಿಸಲು ಮತ್ತು ಅದರ ವ್ಯಾಪ್ತಿಯನ್ನು ಇನ್ನೂ ತಳಮಟ್ಟಕ್ಕೆ ವಿಸ್ತರಿಸಲು ಸರ್ಕಾರ ಸಮಗ್ರ ಯೋಜನೆಯೊಂದನ್ನು ಅನುಮೋದಿಸಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಪಂಚಾಯಿತಿ ಮತ್ತು ಗ್ರಾಮವನ್ನು ಒಳಗೊಂಡು ಡೈರಿ ಮತ್ತು ಮೀನುಗಾರಿಕಾ ಸಹಕಾರಿ ಸಂಘಗಳೊಂದಿಗೆ ಎರಡು ಲಕ್ಷ ಹೊಸ ಬಹೂಪಯೋಗಿ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (PACS) ರಚಿಸುವುದು ಈ ದೃಷ್ಟಿಕೋನದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. ಈ ಮಹತ್ವಾಕಾಂಕ್ಷೆಯ ವಿಸ್ತರಣೆಯನ್ನು ನಬಾರ್ಡ್, ಎನ್‌ಡಿಡಿಬಿ, ಎನ್‌ಎಫ್‌ಡಿಬಿ ಮತ್ತು ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಡೈರಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್), ರಾಷ್ಟ್ರೀಯ ಡೈರಿ ಅಭಿವೃದ್ಧಿ ಕಾರ್ಯಕ್ರಮ (ಎನ್‌ಪಿಡಿಡಿ), ಮತ್ತು ಪಿಎಂ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಸೇರಿದಂತೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಒಮ್ಮುಖದ ಮೂಲಕ ಸಾಧಿಸಲಾಗುವುದೂ ಎಂದು ಅಮಿತ್ ಷಾ ಮಾಹಿತಿ ನೀಡಿದರು.


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆರ್ಥಿಕ ಕೇಂದ್ರಗಳಾಗಿ ಪರಿವರ್ತಿಸಲು, ಸಹಕಾರ ಸಚಿವಾಲಯವು ಅವುಗಳು 25ಕ್ಕೂ ಹೆಚ್ಚು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಮಾದರಿ ಬೈಲಾಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಡೈರಿ ಮತ್ತು ಮೀನುಗಾರಿಕಾ ಉದ್ಯಮಗಳಿಂದ ಹಿಡಿದು ಆಹಾರ ಧಾನ್ಯ ಸಂಗ್ರಹಣೆ, ರಸಗೊಬ್ಬರ ಮತ್ತು ಬೀಜ ವಿತರಣೆ, ಇಂಧನ ಚಿಲ್ಲರೆ ವ್ಯಾಪಾರ, ಎಲ್‌ಪಿಜಿ/ ಸಿಎನ್‌ಜಿ ವಿತರಣಾ ವ್ಯವಸ್ಥೆ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯಗಳು, ಕಸ್ಟಮ್ ನೇಮಕಾತಿ ಕೇಂದ್ರಗಳು, ನ್ಯಾಯಬೆಲೆ ಅಂಗಡಿಗಳು, ನೀರಾವರಿ ಸೇವೆಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಕಾರ್ಯಾಚರಣೆಗಳು ಸೇರಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚಟುವಟಿಕೆಗಳನ್ನು ವೈವಿಧ್ಯಮಯಗೊಳಿಸುವುದು ಇದರ ಗುರಿಯಾಗಿದ್ದು ಹೀಗೆ ಮಾಡುವುದರಿಂದ ಅವುಗಳು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸೇವಾ-ಆಧಾರಿತ ಸಮುದಾಯ ಸಂಸ್ಥೆಗಳಾಗಲು ಅನುವು ಮಾಡಿಕೊಡುತ್ತದೆ ಎಂದು ಲೋಕಸಭೆಯಲ್ಲಿ ಅಮಿತ್ ಷಾ ಮಾಹಿತಿ ನೀಡಿದರು.
ಕಾರ್ಯದಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಕ್ರಿಯಾತ್ಮಕ ಪ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಅತ್ಯಂತ ಪರಿವರ್ತನಾತ್ಮಕ ಪ್ರಯತ್ನಗಳಲ್ಲಿ ಒಂದಾಗಿದೆ. ಪ್ಯಾಕ್ಸ್‌ಗಳ ಗಣಕೀಕರಣಕ್ಕೆ ಈ ಹಿಂದೆ ನಿಗದಿಪಡಿಸಿದ್ದ ವೆಚ್ಚ 2,516 ಕೋಟಿ ರೂ.ಗಳಿಂದ 2,925.39 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿದ್ದು, ಈ ಯೋಜನೆಯು ದೇಶಾದ್ಯಂತ ಎಲ್ಲಾ ಕ್ರಿಯಾತ್ಮಕ ಪ್ಯಾಕ್ಸ್‌ಗಳನ್ನು ಏಕೀಕೃತ ಇಆರ್‌ಪಿ ಆಧಾರಿತ ರಾಷ್ಟ್ರೀಯ ಸಾಫ್ಟ್‌ವೇರ್ ವ್ಯವಸ್ಥೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಈ ಸಂಘಗಳನ್ನು ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ನಬಾರ್ಡ್‌ನೊಂದಿಗೆ ಡಿಜಿಟಲ್ ಸಂಪರ್ಕದಲ್ಲಿರಿಸಲಾಗುವುದು. ಈ ಯೋಜನೆಯಡಿಯಲ್ಲಿ ಈ ತನಕ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 73,492 ಪ್ಯಾಕ್ಸ್‌ಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 59,920 ಈಗಾಗಲೇ ಇಆರ್‌ಪಿ ವ್ಯವಸ್ಥೆಗೆ ಸಂಯೋಜಿಸಲ್ಪಟ್ಟಿವೆ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾರ್ಡ್‌ವೇರ್ ಖರೀದಿ ಪೂರ್ಣಗೊಂಡಿದೆ ಎಂದು ವಿವರ ನೀಡಿದರು.


ಪ್ಯಾಕ್ಸ್‌ಗಳನ್ನು ಸಾಮಾನ್ಯ ಸೇವಾಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ, 47,918 ಪ್ಯಾಕ್ಸ್‌ಗಳಲ್ಲಿ ಬ್ಯಾಂಕಿಂಗ್, ವಿಮೆ, ಆರೋಗ್ಯ ಸೇವೆಗಳು ಮತ್ತು ಬಿಲ್ ಪಾವತಿಗಳಂತಹ 300ಕ್ಕೂ ಹೆಚ್ಚು ಇ-ಸೇವೆಗಳನ್ನು ಒದಗಿಸಲಾಗುತ್ತಿದೆ. 36,592 ಪ್ಯಾಕ್ಸ್‌ಗಳನ್ನು ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಎಂದು ಗೊತ್ತುಪಡಿಸಲಾಗಿದೆ. ಇವುಗಳು ರೈತರಿಗೆ ರಸಗೊಬ್ಬರಗಳು ಮತ್ತು ಕೃಷಿಗೆ ಬೇಕಾದ ಇತರ ಉಪಕರಣ, ಸವಲತ್ತುಗಳನ್ನು ನೀಡುತ್ತವೆ. 762 ಪ್ಯಾಕ್ಸ್‌ಗಳು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಸರ್ಕಾರವು ಪ್ಯಾಕ್ಸ್‌ಗಳನ್ನು ಇಂಧನ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಲ್‌ಪಿಜಿ ವಿತರಣಾ ಕೇಂದ್ರಗಳಾಗಿ ಬದಲಿಸುತ್ತಿದ್ದು, ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳು 117 ಪ್ಯಾಕ್ಸ್‌ಗಳನ್ನು ಸಗಟು ಇಂಧನ ಗ್ರಾಹಕರಿಂದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಪರಿವರ್ತಿಸಲು ಅನುಮೋದಿಸಿದ್ದು ಈ ಪೈಕಿ 59 ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಅಮಿತ್ ಷಾ ತಿಳಿಸಿದ್ದಾರೆ.

