ಜುಲೈ 24ರಂದು ಸಹಕಾರ ಸಚಿವ ಅಮಿತ್ ಷಾ ಅವರಿಂದ ಔಪಚಾರಿಕವಾಗಿ ಬಿಡುಗಡೆ
ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರ ನೀತಿ -2025 ಇದರ ಔಪಚಾರಿಕ ಘೋಷಣೆಗೆ ದಿನ ನಿಗದಿಯಾಗಿದೆ. ಇದೇ ಬರುವ ಜುಲೈ 24ರ ಗುರುವಾರ ದಿನ ಅಮಾವಾಸ್ಯೆಯಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರು, ಸಹಕಾರ ಸಚಿವಾಲಯದ ಪ್ರಧಾನ ಕಚೇರಿ ನವದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದ ಸಭಾಂಗಣದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಿದ್ದಾರೆ.
https://chat.whatsapp.com/EbVKVnWB6rlHT1mWtsgbch
ರಾಷ್ಟ್ರೀಯ ಸಹಕಾರ ನೀತಿಯ ಅನಾವರಣವು ಭಾರತದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಸಮೃದ್ಧಿ (ಸಹಕಾರದ ಮೂಲಕ ಸಮೃದ್ಧಿ) ದೃಷ್ಟಿಕೋನದಡಿ ಸಹಕಾರಿ ವಲಯವನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಗುರಿಯನ್ನು ಹೊಂದಿರುವ ಪರಿವರ್ತನಾಶೀಲ ಸುಧಾರಣೆಗಳಿಗೆ ಈ ರಾಷ್ಟ್ರೀಯ ಸಹಕಾರ ನೀತಿ ಅಡಿಪಾಯ ಹಾಕುವ ನಿರೀಕ್ಷೆಯಿದೆ.







ರಾಷ್ಟ್ರೀಯ ಸಹಕಾರಿ ನೀತಿಯನ್ನು ಸಿದ್ಧಪಡಿಸಲು, ಭಾರತ ಸರ್ಕಾರವು 2022ರ ಸೆಪ್ಟೆಂಬರ್ 2ರಂದು ಮಾಜಿ ಸಚಿವ ಸುರೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಹಕಾರಿ ವಲಯದ ತಜ್ಞರು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಪ್ರಾಥಮಿಕ ಹಂತದ ಸಂಘಗಳ ಪ್ರತಿನಿಧಿಗಳು ಹಾಗೂ ಸಹಕಾರ ಸಚಿವಾಲಯ ಮತ್ತು ಇತರ ಕೇಂದ್ರ ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿ 17 ಸಭೆಗಳನ್ನು ನಡೆಸಿತ್ತಲ್ಲದೆ, ಸಹಕಾರಿ ಸಂಘಗಳು, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕಾ ತಜ್ಞರಿಂದ ಸಲಹೆಗಳನ್ನು ಸಂಗ್ರಹಿಸಲು ನಾಲ್ಕು ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸಿತ್ತು. ಇಲ್ಲಿ ಬಂದ ಸಲಹೆಗಳನ್ನು ಆಯ್ಕೆ ಮಾಡಿ ಕರಡು ನೀತಿಯಲ್ಲಿ ಸೇರಿಸಲಾಗಿದೆ.
ಸಹಕಾರಿ ನೀತಿಯು 2024ರಿಂದ 2047ರವರೆಗಿನ ಬೆಳವಣಿಗೆಗೆ ರಚನಾತ್ಮಕ ಮಾರ್ಗಸೂಚಿಯನ್ನು ಒದಗಿಸುವ ಮೂಲಕ ಭಾರತದ ಸಹಕಾರಿ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಕರಡಿನ ಪ್ರಮುಖ ಮುಖ್ಯಾಂಶಗಳಲ್ಲಿ ಹಲವಾರು ಹೊಸ ಉನ್ನತ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾಪವಿದೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ ಸಹಕಾರಿ ಸಂಸ್ಥೆಗಳಿಗಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆ, ಸಹಕಾರಿ ಸಂಸ್ಥೆಗಳಲ್ಲಿ ಶ್ರೇಷ್ಠತಾ ಕೇಂದ್ರ, ರಾಷ್ಟ್ರೀಯ ಸಹಕಾರಿ ನೇಮಕಾತಿ ಮಂಡಳಿ, ರಾಷ್ಟ್ರೀಯ ಸಹಕಾರಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಮಂಡಳಿ ಮತ್ತು ರಾಷ್ಟ್ರೀಯ ಸಹಕಾರಿ ನ್ಯಾಯಮಂಡಳಿಗಳು ಸೇರಿವೆ ಎನ್ನಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

