ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿಕೆ
ಮಂಗಳೂರು: ನವೋದಯ ಸ್ವಸಹಾಯ ಗುಂಪುಗಳು ದೇಶಕ್ಕೇ ಮಾದರಿಯಾಗಿ ರಚನೆಯಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ, ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
https://chat.whatsapp.com/EbVKVnWB6rlHT1mWtsgbch
ಹಿಂದಿನ ಕಾಲದಲ್ಲಿ ಹೊರಗಿನ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತ್ಯಂತ ಕಡಿಮೆಯಾಗಿತ್ತು. ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಬೆಳೆಸುವ ಚಿಂತನೆ 25 ವರ್ಷಗಳ ಹಿಂದೆ ಮೂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನವೋದಯ ಸ್ವಸಹಾಯ ಗುಂಪಿನ ಉಗಮವಾಯಿತು. 2000ರಲ್ಲಿ ಕಾರ್ಕಳದಲ್ಲಿ ಅಂದಿನ ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಮೊದಲ ದಿನವೇ 9,500ರಷ್ಟು ಮಹಿಳೆಯರು ಭಾಗವಹಿಸಿ ಸ್ವಸಹಾಯ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ಇಂದು ಆ ಸಂಖ್ಯೆ ಐದು ಲಕ್ಷ ತಲುಪಿದೆ ಎಂದು ಹೇಳಿದರು.
ನವೋದಯ ಸ್ವಸಹಾಯ ಗುಂಪುಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಇದರ ರಜತ ಸಂಭ್ರಮವನ್ನು ದೇಶ, ರಾಜ್ಯಕ್ಕೆ ಮಾದರಿಯಾಗುವಂತೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 1.5 ಲಕ್ಷಕ್ಕೂ ಅಧಿಕ ಸಮವಸ್ತ್ರ ಧರಿಸಿದ ಮಹಿಳೆಯರು ಒಂದೆಡೆ ಒಟ್ಟುಗೂಡುವ ದಾಖಲೆ ಈ ಮೂಲಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಈಗ ಎಲ್ಲೆಡೆ ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ, ಆತ್ಮಹತ್ಯೆ ಎನ್ನುವ ಸುದ್ದಿಗಳೇ ಹೆಚ್ಚುತ್ತಿವೆ. ಆತ್ಮಹತ್ಯೆ ನಡೆಯುತ್ತಿರುವುದು ಮೈಕ್ರೋ ಫೈನಾನ್ಸ್‌ನಿಂದ ಅಲ್ಲ ಎಂದು ಒತ್ತಿ ಹೇಳಿದ ಡಾ.ರಾಜೇಂದ್ರ ಕುಮಾರ್, ಚಕ್ರಬಡ್ಡಿ ದಂಧೆ ನಡೆಸುವವರಿಂದ ಈ ರೀತಿ ಆಗುತ್ತಿದೆ. ನಾವು ಯಾವುದೇ ಒಬ್ಬ ವ್ಯಕ್ತಿಗೆ ಸಾಲ ಕೊಡುವುದಲ್ಲ, ಬದಲಾಗಿ ಒಂದು ಗುಂಪಿಗೆ ನೀಡುತ್ತೇವೆ. ಸಾಲ ವಸೂಲಾತಿ ಎನ್ನುವ ಕಲ್ಪನೆಯೇ ನಮ್ಮಲ್ಲಿಲ್ಲ, ಆದರೆ ಶೇ.99ರಷ್ಟು ಮರುಪಾವತಿ ಆಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರ ಅಭ್ಯುದಯ:
ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಡಾ.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಗ್ರಮಾನ್ಯ ಬ್ಯಾಂಕ್‌ಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಇದರ ಜತೆಗೆ ನವೋದಯಸ್ವಸಹಾಯ ಗುಂಪುಗಳನ್ನು ಕಟ್ಟಿದ್ದು, ಮಹಿಳೆಯರ ಅಭ್ಯದಯಕ್ಕೆ ಕಾರಣವಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಡಾ.ರಾಜೇಂದ್ರ ಕುಮಾರ್ ಯಾವ ಕ್ಷೇತ್ರದಲ್ಲಿ ಕೈಯಾಡಿಸಿದರೂ ಅದರಲ್ಲಿ ಅವರ ಛಾಪು ಇರುತ್ತದೆ ಎನ್ನುವುದಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್, ನವೋದಯ ಸ್ವಸಹಾಯ ಬೆಳವಣಿಗೆಯೇ ಉದಾಹರಣೆ ಎಂದರು.

ಜಿಲ್ಲಾಡಳಿತದಿಂದ ನೆರವಿನ ಭರವಸೆ
ಸ್ವಸಹಾಯ ಸಂಘಗಳಿಗೆ ಜಿಲ್ಲಾಡಳಿತದಿಂದ ನೆರವು ಬೇಕಿದ್ದಲ್ಲಿ ನೀಡಲು ಸಿದ್ಧ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣವು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಪೂರಕ. ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡುತ್ತಿ ರುವುದು ಶ್ಲಾಘನೀಯ. 5 ಲಕ್ಷ ಮಂದಿ ಮಹಿಳೆಯರಿಗೆ ಸಮವಸ್ತ್ರ ವಿತರಿಸುತ್ತಿರುವುದು ಅನನ್ಯ ಕೊಡುಗೆ. ಡಾ.ರಾಜೇಂದ್ರ ಕುಮಾರ್ ಅವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು. ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಆರಂಭಿಸಿರುವ ಡಾ.ರಾಜೇಂದ್ರ ಕುಮಾರ್ ಎಂಟು ಜಿಲ್ಲೆಗಳಲ್ಲಿ ಹೊಸ ಕ್ರಾಂತಿಗೆ ಕಾರಣಕರ್ತರಾಗಿದ್ದಾರೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಿ., ಎಸ್.ಬಿ.ಜಯರಾಮ ರೈ, ಎಂ.ಮಹೇಶ್ ಹೆಗ್ಡೆ, ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ, ಎಸ್.ಎನ್.ಮನ್ಮಥ, ರಾಜೇಶ್ ರಾವ್, ಎಸ್‌ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಟ್ರಸ್ಟಿಗಳಾದ ಮೇಘರಾಜ್ ಜೈನ್, ಸುನಿಲ್ ಕುಮಾರ್ ಬಜಗೋಳಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮೊದಲಾದವರು ಪಾಲ್ಗೊಂಡಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com