ಮಾರ್ಚ್ 24, 25ಕ್ಕೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ: ಬ್ಯಾಂಕ್ ಉದ್ಯೋಗಿಗಳು ಮಾರ್ಚ್ 24 ಮತ್ತು 25ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಂಡಿರುವ ಕಾರಣ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದ್ದು, ಹಣಕಾಸು ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಮಾರ್ಚ್ 22, 23ರಂದು ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆ ಇರಲಿದ್ದು, 24 ಮತ್ತು 25ರಂದು ನೌಕರರು ಮುಷ್ಕರ ಹೂಡಿದರೆ ಸತತ ನಾಲ್ಕು ರಜೆಗಳಿಂದಾಗಿ ಸೇವೆಯಲ್ಲಿ ವ್ಯತ್ಯಯವಾಗಲಿದೆ.
https://chat.whatsapp.com/EbVKVnWB6rlHT1mWtsgbch
ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮಾರ್ಚ್ 24, 25ರಂದು ಮುಷ್ಕರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಬ್ಯಾಂಕ್‌ಗಳ ಸಂಘಟನೆ ಐಬಿಎ ಜೊತೆ ನಡೆದ ಮಾತುಕತೆಯಲ್ಲಿ ಯಾವುದೇ ಭರವಸೆ ಮೂಡದ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯು (UFBU- United Forum for Bank Unions) ರಾಷ್ಟ್ರವ್ಯಾಪಿ ಮುಷ್ಕರದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಒಂಬತ್ತು ಸರ್ಕಾರಿ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳು ಸೇರಿ ರಚಿಸಲಾಗಿರುವ ಯುನೈಟೆಡ್ ಫೋರಂ ಮುಷ್ಕರದ ನಿರ್ಧಾರ ಹಿಂಪಡೆಯುವುದಿಲ್ಲ ಎಂದು ಮಾರ್ಚ್ 13ರಂದು ಹೇಳಿತ್ತು. ಐಬಿಎ ಜೊತೆ ಅದು ಎರಡು ದಿನ ಮಾತುಕತೆ ನಡೆಸಿತ್ತು. ಆದರೆ, ಬ್ಯಾಂಕ್ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಗುವ ಯಾವ ಭರವಸೆಯೂ ಮಾತುಕತೆಯಲ್ಲಿ ಬರಲಿಲ್ಲ ಎಂದು ಬ್ಯಾಂಕ್ ಯೂನಿಯನ್ಗಳ ಮಹಾ ಒಕ್ಕೂಟವು ಹೇಳಿದೆ.
ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳೇನು?
ವಾರದಲ್ಲಿ ಎರಡು ದಿನ ವೀಕಾಫ್ ಬೇಕು. ಐದು ವರ್ಕ್ ಡೇ ವೀಕ್ ನೀತಿ ಜಾರಿಗೆ ತರಬೇಕು. ಸರ್ಕಾರಿ ಬ್ಯಾಂಕುಗಳಲ್ಲಿ ವಿವಿಧ ಸ್ತರಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಗ್ರಾಚ್ಯುಟಿ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಉದ್ಯೋಗಿಗಳ ಪರ್ಫಾರ್ಮೆನ್ಸ್ ರಿವ್ಯೂ ಮತ್ತು ಕಾರ್ಯಕ್ಷಮತೆ ಆಧಾರಿತವಾಗಿ ಭತ್ಯೆ ನೀಡುವ ಕ್ರಮದಿಂದ ಉದ್ಯೋಗಿಯ ಕೆಲಸದ ಅಭದ್ರತೆ ಹೆಚ್ಚುತ್ತದೆ, ಉದ್ಯೋಗಿಗಳ ನಡುವಿನ ಸಂಬಂಧ ದುರ್ಬಲಗೊಳ್ಳುತ್ತದೆ. ಹೀಗಾಗಿ ಆ ನಿರ್ದೇಶನಗಳನ್ನು ಹಿಂಪಡೆಯಬೇಕು. ಕೇಂದ್ರ ಹಣಕಾಸು ಸೇವೆಗಳ ಇಲಾಖೆಯು ಸರ್ಕಾರಿ ಬ್ಯಾಂಕುಗಳ ಸಣ್ಣ ಸಣ್ಣ ವ್ಯವಹಾರದಲ್ಲೂ ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು. ಬ್ಯಾಂಕ್ ಮಂಡಳಿಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com