ಸಣ್ಣ ಕಾರ್ಮಿಕ ಸಹಕಾರಿ ಸಂಸ್ಥೆಯಿಂದ ಅಭಿವೃದ್ಧಿ ಹೊಂದಿ ಉದ್ಯಮವಾಗಿ ರೂಪಾಂತರಗೊಂಡ ಸೊಸೈಟಿ
ತಿರುವನಂತಪುರ: ಉರಾಲುಂಗಲ್ ಕಾರ್ಮಿಕ ಒಪ್ಪಂದ ಸಹಕಾರ ಸಂಘ(ಯುಎಲ್‌ಸಿಸಿಎಸ್) ಒಂದು ಸಣ್ಣ ಕಾರ್ಮಿಕ ಸಹಕಾರಿ ಸಂಸ್ಥೆಯಿಂದ ಆರಂಭವಾಗಿ ದೊಡ್ಡ ಉದ್ಯಮ ಸಂಸ್ಥೆಯಾಗಿ ಬೆಳೆದು 100 ವರ್ಷಗಳ ಅದ್ಭುತ ಪ್ರಯಾಣ ಮುಂದುವರಿಸಿದ್ದು ದೇಶದಲ್ಲಿ ಪ್ರಸಿದ್ಧಿ ಪಡೆದುಕೊಂಡ ಕೆಲವೇ ಕೆಲವು ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶ್ಲಾಘಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಕಾರ್ಮಿಕ ಸಹಕಾರಿ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟ ಯುಎಲ್‌ಸಿಸಿಎಸ್ ಕೇರಳ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
https://chat.whatsapp.com/EbVKVnWB6rlHT1mWtsgbch
ವಿಡಿಯೋ ಸಂದೇಶವೊಂದನ್ನು ನೀಡಿರುವ ನಿತಿನ್ ಗಡ್ಕರಿ, ಯುಎಲ್‌ಸಿಸಿಎಸ್‌ನ ಯಶೋಗಾಥೆಯನ್ನು ಅಭಿನಂದಿಸಿ, 100 ವರ್ಷ ಪೂರೈಸಿ ಮುನ್ನಡೆದಿರುವುದಕ್ಕೆ ಶುಭಾಶಯ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಯುಎಲ್‌ಸಿಸಿಎಸ್ ಸಹಕಾರಿ ವಲಯದೊಂದಿಗೆ ಸಂಬಂಧ ಹೊಂದಿದ್ದು, ಇದರ ಯಶಸ್ಸು ದೇಶದ ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಬೆಳವಣಿಗೆಗಳಲ್ಲಿ ಒಂದಾಗಿದೆ. ಇದರ ಬೆಳವಣಿಗೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸಹಕಾರ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಗುರು ವಾಗ್ಭಟಾನಂದರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭವಾದ ಯುಎಲ್‌ಸಿಸಿಎಸ್ ಪ್ರಯಾಣ ಸಾವಿರಾರು ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಕೆಲಸ ನೀಡುವ ಮೂಲಕ ಪ್ರಬಲ ಚಳುವಳಿಯಾಗಿ ರೂಪಾಂತರಗೊಂಡಿದೆ. ಯುಎಲ್‌ಸಿಸಿಎಸ್ ಕೇರಳದ ಮೂಲಸೌಕರ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಮಾದರಿ ಸಹಕಾರಿ ಸಂಸ್ಥೆಯಾಗಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಕೆಲಸದ ಗುಣಮಟ್ಟ ಮತ್ತು ಸಮಯೋಚಿತ ಅನುಷ್ಠಾನಕ್ಕಿರುವ ಸಂಸ್ತೆಯ ಬದ್ಧತೆ ನಿಜಕ್ಕೂ ಶ್ಲಾಘನೀಯ. ಇದು ದೇಶದ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಒಂದು ವಿಶಿಷ್ಟ ಉದಾಹರಣೆ ಎಂದು ಗಡ್ಕರಿ ಹೇಳಿದ್ದಾರೆ.
ಕಳೆದ ಕೆಲವು ದಶಕಗಳಲ್ಲಿ ಯುಎಲ್‌ಸಿಸಿಎಸ್ ಸಣ್ಣ ಕಾರ್ಮಿಕ ಸಮೂಹದಿಂದ ಅಭಿವೃದ್ಧಿ ಹೊಂದಿ ಉದ್ಯಮವಾಗಿ ರೂಪಾಂತರಗೊಂಡಿದೆ. ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದೆ. ಐಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಿಗೂ ವಿಸ್ತರಣೆಯಾಗಿದೆ. ಸವಾಲುಗಳ ಮಧ್ಯೆಯೂ ಈ ಸಹಕಾರಿ ಸಂಸ್ಥೆ ಕಾರ್ಮಿಕರ ನೇತೃತ್ವದಲ್ಲೇ ಅಭಿವೃದ್ಧಿ ಹೊಂದಿರುವುದು ಗಮನೀಯ ಅಂಶ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com