ಮಂಗಳೂರು: ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿರುವ ಇತಿಹಾಸ ಪ್ರಸಿದ್ಧ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೇರುಗಳ ಜಾತ್ರೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರಿಗೆ ಪ್ರತಿಷ್ಠಿತ “ರಾಮಜಾಲು ಗರಡಿ ಗೌರವ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
https://chat.whatsapp.com/Ge11n7QCiMj5QyPvCc0H19
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಧರ್ಮದ ಅರಿವು ನಮ್ಮಲ್ಲಿ ಬರಬೇಕಾದರೆ ನಾವು ಧರ್ಮ ಗ್ರಂಥಗಳನ್ನು ಓದುವವರಾಗಬೇಕು, ಕೇವಲ ಭಾಷಣದಿಂದ ನಮ್ಮಲ್ಲಿ ಧರ್ಮದ ಅರಿವು ಮೂಡಲು ಅಸಾಧ್ಯ. ಪುಸ್ತಕ ಭಂಡಾರದಿಂದ ಹಾಗೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿ ಧರ್ಮದ ಅರಿವು ಹೆಚ್ಚಾಗಲು ಸಾಧ್ಯವಿದೆ” ಎಂದರು.
ರಾಮಜಾಲು ಗರಡಿಯ ಗೌರವವಾಗಿ “ರಾಮಜಾಲು ಗರಡಿ ಗೌರವ ಪ್ರಶಸ್ತಿʼʼಯನ್ನು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ತರಂಜನ್ ಬೋಳಾರ್, “ರಾಮಜಾಲುವಿನ ಗರಡಿ ಜಾತ್ರೋತ್ಸವ ಕಂಡು ಬಹಳ ಸಂತೋಷವಾಗಿದೆ. ನನ್ನ ಬೆಳವಣಿಗೆಗೆ ಬೈದೇರುಗಳ ಆಶೀರ್ವಾದವೇ ಕಾರಣ. ಅವರ ಸೇವೆಯಿಂದಲೇ ನಾನು ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಂದು ನನಗೆ ಪ್ರದಾನ ಮಾಡಿದ ಈ ಗೌರವ ಪ್ರಶಸ್ತಿ ಬೈದೇರುಗಳ ಪ್ರಸಾದವಾಗಿದೆ. ಇದರಿಂದ ಸಮಾಜದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ್, ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಸರಸ್ವತಿ ಸಂಜೀವ ಪೂಜಾರಿ ಕೂರೇಲು, ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಹರ್ಷಿತ್ ಕುಮಾರ್ ಕೂರೇಲು ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com