25 ರಾಜ್ಯಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಜಿ
ನವದೆಹಲಿ: ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 286 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳ ಸಹಯೋಗದೊಂದಿಗೆ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಔಟ್‌ಲೆಟ್‌ಗಳನ್ನು ಸ್ಥಾಪಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮಿತ್ ಷಾ, ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಔಟ್‌ಲೆಟ್‌ಗಳನ್ನು ಸ್ಥಾಪಿಸಲು ನಾಲ್ಕು ರಾಜ್ಯಗಳ 109 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅರ್ಜಿ ಸಲ್ಲಿಸಿದ ಬಳಿಕದ ಕೆಲವೊಂದು ವಿಧಿವಿಧಾನಗಳನ್ನೂ ಪೂರೈಸಿದ್ದು 45 ಸೊಸೈಟಿಗಳಿಗೆ ಈಗಾಗಲೇ ಉದ್ದೇಶ ಪತ್ರಗಳನ್ನೂ ವಿತರಿಸಲಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳನ್ನು ಇನ್ನಷ್ಟು ಬಲಪಡಿಸುವ, ಗ್ರಾಮೀಣ ಜೀವನಮಟ್ಟವನ್ನು ಸುಧಾರಿಸುವ ಮತ್ತು ಅಗತ್ಯ ಸೇವೆಗಳಿಗೆ ಸೊಸೈಟಿಗಳ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಮಹತ್ವದ ಉಪಕ್ರಮಗಳ ಬಗ್ಗೆ ಅಮಿತ್ ಷಾ ಮಾಹಿತಿ ಒದಗಿಸಿದರು. ಈ ಉಪಕ್ರಮಗಳು ಸೊಸೈಟಿಗಳಿಗೆ ಹೆಚ್ಚುವರಿ ಆದಾಯದ ಮಾರ್ಗಗಳನ್ನು ರೂಪಿಸುವ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನೂ ಆದಾಯದ ನಿಟ್ಟಿನಲ್ಲಿ ಸುಸ್ಥಿರಗೊಳಿಸುತ್ತದೆ. ಗ್ರಾಮೀಣ ಭಾಗದ ಯುವಕರಿಗೆ ಹೆಚ್ಚುವರಿ ಉದ್ಯೋಗವನ್ನೂ ಸೃಷ್ಟಿಸಲಿದ್ದು, ಕೃಷಿ ಮತ್ತು ಸಾರಿಗೆ ಅಗತ್ಯಗಳಿಗಾಗಿ ಇಂಧನದ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಅಂತಹ ಸೇವೆಗಳಿಗೆ ನಗರ ಕೇಂದ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಾಗ ಸ್ಥಳೀಯ ಆರ್ಥಿಕ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ ಎಂದು ವಿಶ್ಲೇಷಿಸಿದರು.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಮೂಲಕ ಡೈರಿ ಸಹಕಾರ ಯೋಜನೆಯಡಿ ದೇಶಾದ್ಯಂತ ಡೈರಿ ಸಹಕಾರಿ ಸಂಸ್ಥೆಗಳಿಗೆ 145.81 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ ಎಂದು ಅಮಿತ್ ಷಾ ಬಣ್ಣಿಸಿದರು. ಈ ಮಧ್ಯೆ ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸದ ಕಾರಣ ಹರಿಯಾಣ ರಾಜ್ಯಕ್ಕೆ ನೆರವು ಲಭಿಸಿಲ್ಲ ಎಂದು ಗೃಹಸಚಿವರೂ ಆಗಿರುವ ಅಮಿತ್ ಷಾ ತಿಳಿಸಿದರು.
ಗ್ರಾಮೀಣ ಡಿಜಿಟಲ್ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿ, ಪ್ಯಾಕ್ಸ್‌ಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಅಮಿತ್ ಷಾ ಪ್ರಸ್ತಾಪಿಸಿದರು. ಸಹಕಾರ ಸಚಿವಾಲಯ, ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ನಬಾರ್ಡ್ ಮತ್ತು ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ನಡುವಿನ ತಿಳುವಳಿಕಾ ಒಪ್ಪಂದದ ಮೂಲಕ ಇದನ್ನು ಸುಗಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 21, 2024ರ ಬಳಿಕ ದೇಶದ 40,214 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಬ್ಯಾಂಕಿಂಗ್, ವಿಮೆ, ಕೃಷಿ, ಆರೋಗ್ಯ ಮತ್ತು ವಿವಿಧ ಸರ್ಕಾರದಿಂದ ನಾಗರಿಕರಿಗೆ ಒದಗಿಸುವ ಸೇವೆಗಳನ್ನು ಒಳಗೊಂಡಂತೆ 300ಕ್ಕೂ ಹೆಚ್ಚು ಇ-ಆಡಳಿತ ಸೇವೆಗಳನ್ನು ಪ್ರಾರಂಭಿಸಿವೆ. ಈ ಸೇವೆಗಳಿಗೆ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಮೂಲಕ, ಪ್ಯಾಕ್ಸ್‌ಗಳು ಗ್ರಾಮೀಣ-ನಗರ ವಿಭಜನೆಯನ್ನು ಕಡಿಮೆ ಮಾಡಿ, ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಗ್ರಾಮೀಣ ನಾಗರಿಕರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಸುಧಾರಿಸುತ್ತದೆ. ಸಿಎಸ್‌ಸಿ ಸೇವೆಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಕ್ಸ್‌ಗಳ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಷಾ ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com