ನವದೆಹಲಿ: ಸಹಕಾರ ಭಾರತಿ ರಾಷ್ಟ್ರಾಧ್ಯಕ್ಷರಾಗಿ ಡಾ.ಉದಯ ಜೋಶಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಚೌರಾಸಿಯ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.
ಅಮೃತ್‌ಸರ್‌ನಲ್ಲಿ ನಡೆಯುತ್ತಿರುವ ಸಹಕಾರ ಭಾರತಿಯ ರಾಷ್ಟ್ರೀಯ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. ಡಾ.ಉದಯ ಜೋಶಿ ರಾಷ್ಟ್ರಾಧ್ಯಕ್ಷರಾಗಿ ಡಿ.ಎನ್.ಠಾಕೂರ್ ಅವರ ಸ್ಥಾನ ತುಂಬಲಿದ್ದಾರೆ. ಸಹಕಾರ ಭಾರತಿಯ ದೀಘರ್ಕಾಲೀನ ಸಕ್ರಿಯ ಕಾರ್ಯಕರ್ತರಾಗಿದ್ದ ಬಿಹಾರದ ದೀಪಕ್ ಚೌರಾಸಿಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಉದಯ ಜೋಶಿ ಅವರ ಸ್ಥಾನ ತುಂಬಲಿದ್ದಾರೆ.
1957ರ ಸೆಪ್ಟೆಂಬರ್ 17ರಂದು ಜನಿಸಿದ್ದ ಡಾ.ಜೋಶಿ ಅಲಿಬಾಘ್‌ನ ಜೆಎಸ್‌ಎಂ ಕಾಲೇಜಿನಲ್ಲಿ 35 ವರ್ಷ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಉಪಪ್ರಾಂಶುಪಾಲರರಾಗಿ ಭಡ್ತಿ ಪಡೆದಿದ್ದರು. ಮುಂಬೈ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ, 37 ವರ್ಷಗಳಷ್ಟು ಕಾಲ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಎನ್‌ಸಿಯುಐ (ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ)ನ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಹಣಕಾಸು ಸಚಿವರ ಜೊತೆ ಬಜೆಟ್ ಪೂರ್ವ ಸಲಹಾ ಸಮಿತಿಯಲ್ಲಿದ್ದು ಬಜೆಟ್ ತಯಾರಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
2015ರಿಂದ ಸಹಕಾರ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜೋಶಿಯವರು, 25 ವರ್ಷಗಳಿಂದಲೂ ಅಧಿಕ ಕಾಲದಿಂದ ಸಹಕಾರ ಭಾರತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯಗಢ ಜಿಲ್ಲಾ ಕ್ರೆಡಿಟ್ ಸೊಸೈಟಿ ಫೆಡರೇಶನ್‌ನ ಸ್ಥಾಪಕ ನಿರ್ದೇಶಕರಲ್ಲಿ ಇವರೂ ಒಬ್ಬರು.
ದೀಪಕ್ ಚೌರಾಸಿಯ ಸಹಕಾರ ಭಾರತಿಯಲ್ಲಿ ಕಳೆದ 18 ವರ್ಷಗಳಿಂದ ತೊಡಗಿಸಿಕೊಂಡಿದ್ದು ಪ್ರಸಕ್ತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಇವರ ತಂದೆ ಗಂಗಾಪ್ರಸಾದ್ ಸಿಕ್ಕಿಂ ರಾಜ್ಯಪಾಲರಾಗಿದ್ದರಲ್ಲದೆ ಬಿಹಾರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ರಾಜಕೀಯ ಹಿನ್ನೆಲೆಯಿದ್ದರೂ ಸಹಕಾರಿ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವುದು ಇವರ ವಿಶೇಷ.
Previous Articleರೆಪೊ ದರ ಶೇ. 6.5 ಮುಂದುವರಿಕೆ, ಜಿಡಿಪಿ ಶೇ. 6.6ಕ್ಕೆ ಕಡಿತ
Next Article ಸಂಜಯ್ ಮಲ್ಹೋತ್ರಾ ಆರ್‌ಬಿಐ ನೂತನ ಗವರ್ನರ್
Related Posts
Add A Comment