ಸಹಕಾರಿ ಕ್ಷೇತ್ರದ ಅಧ್ಯಯನ ಹಾಗೂ ಉದ್ಯೋಗ ಬಯಸುವವರಿಗೆ ಪೂರಕವಾಗುವಂತೆ ವಿವಿ ಸ್ಥಾಪನೆಯ ನಿರೀಕ್ಷೆ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಬಾರಿಯ ಅಧಿವೇಶನದಲ್ಲೇ ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಮಸೂದೆಯನ್ನು ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಸಹಕಾರಿ ಕ್ಷೇತ್ರದ ಅಧ್ಯಯನ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಪೂರಕವಾಗುವಂತೆ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಗತ್ಯ ಮಸೂದೆಯನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲಾಗುವುದು. ಸಹಕಾರ ನಿರ್ವಹಣೆಯ ಕೋರ್ಸುಗಳಿಗಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸಲಿದೆ. ದೇಶದಲ್ಲಿ ಸಹಕಾರಿ ಚಳವಳಿಯ ತಳಹದಿಯನ್ನು ಗಟ್ಟಿ ಮಾಡಲು ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.
https://chat.whatsapp.com/Ge11n7QCiMj5QyPvCc0H19
ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿ ಹೊರಬರುವ ವಿದ್ಯಾರ್ಥಿಗಳಿಗೆ ಸಹಕಾರಿ ವಲಯದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಲಿವೆ. ಸಹಕಾರ ನಿರ್ವಹಣೆಯ ಕೋರ್ಸುಗಳಿಗಾಗಿ ಆರಂಭಿಸುವ ಪ್ರತ್ಯೇಕ ವಿಶ್ವವಿದ್ಯಾಲಯಕ್ಕೆ ಹಲವು ರಾಜ್ಯಗಳ ವಿವಿಗಳು ಸಂಯೋಜನೆ ಹೊಂದಿರಲಿವೆ.
ಸಹಕಾರ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಸ್ಥಳದ ಬಗ್ಗೆ ಅಂತಹ ನಿರ್ಧಾರ ಆಗಿಲ್ಲ. ಕೋ-ಆಪ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪಠ್ಯಕ್ರಮಗಳು, ಈಗಾಗಲೇ ಅಸ್ತಿತ್ವದಲ್ಲಿರುವ ಸಹಕಾರ ತರಬೇತಿ ಮತ್ತು ಶಿಕ್ಷಣ ಸಂಸ್ಥೆಗಳ ಏಕೀಕರಣ, ವಿಶ್ವವಿದ್ಯಾನಲಯ ಮತ್ತು ಇತರ ಪ್ರಾಯೋಗಿಕ ವಿವರಗಳು ಅಂತಿಮಗೊಂಡ ಬಳಿಕವೇ ಉದ್ದೇಶಿತ ವಿವಿ ಸ್ಥಾಪನೆಯ ಸ್ಥಳದ ಬಗ್ಗೆ ನಿರ್ಧರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ ಮಧ್ಯಪ್ರದೇಶ ಸಹಕಾರ ಇಲಾಖೆಯು ತಮ್ಮ ರಾಜ್ಯದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರ ಸಹಕಾರ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈ ಪತ್ರದಲ್ಲಿ ಮಧ್ಯಪ್ರದೇಶ ರಾಜ್ಯದ ಸಹಕಾರ ಇಲಾಖೆಯು ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿತ್ತು.
ಲಭ್ಯ ಮಾಹಿತಿ ಪ್ರಕಾರ ವಿಯೆಟ್ನಾಂ, ಥಾಯ್ಲೆಂಡ್, ಕೊಲಂಬಿಯಾ, ಲಾವೋಸ್, ಮಯನ್ಮಾರ್, ಇಂಡೋನೇಶ್ಯಾ, ಕೆನಡಾ, ಅಮೇರಿಕಾ, ಸಿಂಗಾಪುರ, ಫ್ರಾನ್ಸ್, ಬ್ರಿಟನ್, ಸ್ಪೇನ್, ಮಲೇಶ್ಯಾ, ಜಪಾನ್ ದೇಶಗಳಲ್ಲಿ ಆಯಾ ದೇಶದ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯಗಳು ಇವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com