ಗ್ರಾಹಕರ ಅನುಕೂಲಕ್ಕಾಗಿ ಯುಪಿಐ, ಗೂಗಲ್ ಪೇ ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿ: ಅಧ್ಯಕ್ಷ ಅನಿಲ್ ಲೋಬೊ ಹೇಳಿಕೆ
ಉಡುಪಿ: ಎಂ.ಸಿ.ಸಿ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಉಡುಪಿ ಶಾಖೆಯನ್ನು ಅಜ್ಜರಕಾಡು ಪಾರ್ಕ್ ರಸ್ತೆಯ ಶ್ರೀ ಶಿವಧಾಮ ಕಮರ್ಷಿಯಲ್‌ನ ಸ್ವಂತ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಿಸಲಾಯಿತು.
ಉಡುಪಿ ಶಾಖೆಯ ಸ್ಥಳಾಂತರಿತ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಉಡುಪಿಯ ಮದರ್ ಅಫ್ ಸೊರೊವ್ಸ್ ಚರ್ಚ್‌ನ ಧರ್ಮಗುರು ಅತಿವಂದನೀಯ ಫಾದರ್ ಚಾಲರ್ಸ್ ಮಿನೇಜಸ್ ಆಶೀರ್ವಚನ ಮಾಡಿದರು. ಉಡುಪಿಯ ಸೈಂಟ್ ಸಿಸಿಲಿ ಕಾನ್ವೆಂಟ್‌ನ ಸುಪೀರಿಯರ್ ಸಿ| ಜ್ಯೋತಿ ಡಿಸೋಜ ಸೇಫ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು. ಉಡುಪಿ ನಗರ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಖ್ಯಾತ ನ್ಯಾಯವಾದಿ ಮೊಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ರೋಶನ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು.
https://chat.whatsapp.com/Ge11n7QCiMj5QyPvCc0H19
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ, ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ಸೌಲಭ್ಯದೊಂದಿಗೆ ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 22 ವರ್ಷಗಳಿಂದ ಗ್ರಾಹಕರು ನೀಡಿದ ಅವಿರತ ಬೆಂಬಲ ಮತ್ತು ಸಹಕಾರದಿಂದ ಬ್ಯಾಂಕ್‌ನ ವಹಿವಾಟು ಉತ್ತಮವಾಗಿದೆ. 2018ರಲ್ಲಿ 7 ಕೋಟಿ ಇದ್ದ ಠೇವಣಿ ಕಳೆದ 6 ವರ್ಷಗಳಲ್ಲಿ 26 ಕೋಟಿಗೆ ತಲುಪಿದೆ. ಗ್ರಾಹಕರ ಅನುಕೂಲಕ್ಕಾಗಿ ತಾಂತ್ರಿಕ ಉನ್ನತೀಕರಣದ ಅಗತ್ಯವನ್ನು ಮನಗಂಡು ಯುಪಿಐ, ಗೂಗಲ್ ಪೇ, ಇತ್ಯಾದಿಗಳನ್ನು ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.
112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕಿಗೆ ಗ್ರಾಹಕರು ಬೆಂಬಲ ನೀಡುವಂತೆ ಕರೆ ನೀಡಿ, ಬ್ಯಾಂಕಿನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಗ್ರಾಹಕರು, ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿಯವರ ಬೆಂಬಲ, ವಿಶ್ವಾಸ ಮತ್ತು ಸಿಬ್ಬಂದಿಯ ಶ್ರಮದಿಂದ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ ಎಂದರು.
ಸ್ಥಳಾಂತರದ ಶಾಖೆಯನ್ನು ಆಶೀರ್ವಚಿಸಿ ಮಾತನಾಡಿದ ಚಾರ್ಲ್ಸ್ ಮಿನೇಜಸ್, ವಿಶಾಲವಾದ ಪಾರ್ಕಿಂಗ್ ಸೌಲಭ್ಯದೊಂದಿಗೆ ಶಾಖೆಯನ್ನು ಹೆಚ್ಚು ಅನುಕೂಲಕರವಾದ ಸ್ಥಳಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ಅಧ್ಯಕ್ಷರು ಮತ್ತು ಅವರ ಆಡಳಿತ ಮಂಡಳಿಗೆ ಅಭಿನಂದಿಸಿದರು. ಬ್ಯಾಂಕ್ ಗ್ರಾಹಕ ಸೇವೆಗೆ ಪ್ರಾಮುಖ್ಯತೆ ನೀಡಿದಾಗ ಅದು ಹೆಚ್ಚು ವೇಗದಲ್ಲಿ ಬೆಳೆಯುತ್ತದೆ ಎಂದು ಹೇಳಿದರು.
ಸಿ| ಜ್ಯೋತಿ ಡಿಸೋಜ ಮಾತನಾಡಿ ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ ಆಡಳಿತ ಮಂಡಳಿಯನ್ನು ಅಭಿನಂದಿಸಿ, ಎಂ.ಸಿ.ಸಿ. ಬ್ಯಾಂಕಿನಲ್ಲಿನ ಸೇವೆಯ ಅನುಭವವನ್ನು ಹಂಚಿಕೊಂಡು, ಬ್ಯಾಂಕಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಶ್ಲಾಘಿಸಿದರು.
ಎಂಸಿಸಿ ಬ್ಯಾಂಕಿನ ಬುಲೆಟಿನ್ ಅನ್ನು ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಬಿಡುಗಡೆ ಮಾಡಿದರು. ಸಂಪಾದಕ ಡಾ| ಜೆರಾಲ್ಡ್ ಪಿಂಟೊ ಹಾಗೂ ಸಹ ಸಂಪಾದಕಿ ಶೆರಿ ಆಶ್ನಾ ಉಪಸ್ಥಿತರಿದ್ದರು. ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ನ್ಯಾಯವಾದಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ ಬ್ಯಾಂಕ್ ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ಬ್ಯಾಂಕಿನ ಅಧ್ಯಕ್ಷರ ದೂರದೃಷ್ಟಿಯನ್ನು ಶ್ಲಾಘಿಸಿದರು. ಉದ್ಯಮಿ ರೋಶನ್ ಶೆಟ್ಟಿ ಮಾತನಾಡಿ ಉಡುಪಿ ಶಾಖೆಯ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ದೀಪಾವಳಿ ಸಂದರ್ಭ ಬ್ಯಾಂಕ್ ಏರ್ಪಡಿಸಿದ ದೀಪಗಳ ಜೊತೆ ಸಮೂಹ ಭಾವಚಿತ್ರ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನೂತನ ಕಟ್ಟಡದ ಹಿಂದಿನ ಮಾಲಕ ಟಿ.ಎನ್. ಅಮೀನ್ ಹಾಗೂ ಶಾಖೆಯಲ್ಲಿ ಕಾರ್ಯನಿರ್ವಹಿಸಿದ ಸಿವಿಲ್ ಇಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಡುಪಿ ಶಾಖೆಯ ಸಿಬ್ಬಂದಿಯನ್ನು ಪರಿಚಯಿಸಿದರು. ಬ್ಯಾಂಕಿನ ನಿರ್ದೇಶಕರಾದ ಎಲ್‌ರೋಯ್ ಕಿರಣ್ ಕ್ರಾಸ್ಟೊ, ವಿನ್ಸೆಂಟ್ ಲಸ್ರಾದೊ, ಜೋಸೆಫ್ ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ರೋಶನ್ ಡಿಸೋಜ, ಹೆರಾಲ್ಡ್ ಜೋನ್ ಮೊಂತೇರೊ, ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಸುಶಾಂತ್ ಸಲ್ಡಾನ್ಹಾ ಹಾಜರಿದ್ದರು. ಡಾ|ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಉಡುಪಿ ಶಾಖೆಯ ಪ್ರಬಂಧಕ ಪ್ರದೀಪ್ ಡಿಸೋಜ ವಂದಿಸಿ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com