ನವದೆಹಲಿ: ಭಾರತದ ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಅವರನ್ನು ನೇಮಿಸಲಾಗಿದೆ. ಇವರು ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ.
ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ತಮ್ಮ ಉತ್ತರಾಧಿಕಾರಿಯಾಗಿ ಸಂಜೀವ್ ಖನ್ನಾ ಹೆಸರು ಸೂಚಿಸಿದ್ದು ಇದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ವಿಚಾರವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಮ್ಮ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಹಾಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನವೆಂಬರ್ 8 ರಂದು ನಿವೃತ್ತಿ ಹೊಂದಲಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ಚಂದ್ರಚೂಡ್, ಸಂಜೀವ್ ಖನ್ನಾ ಅವರ ಹೆಸರು ಶಿಫಾರಸು ಮಾಡಿದ್ದರು.
ನವಂಬರ್ 11ರಂದು ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕರಿಸಲಿದ್ದು, 2025ರ ಮೇ 13ರಂದು ನಿವೃತ್ತಿಯಾಗಲಿದ್ದಾರೆ. ಅಂದರೆ ಆರು ತಿಂಗಳುಗಳ ಕಾಲ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಸಂಜೀವ ಖನ್ನಾ ಅವರು, 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ದಾಖಲಾಗಿದ್ದರು. ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ, ದೆಹಲಿ ಹೈಕೋರ್ಟ್‌ಗೆ ತೆರಳಿದರು. 2005ರಲ್ಲಿ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರ ಸ್ನಾನಕ್ಕೆ ಏರಿಸಲಾಯಿತು. ಮರುವರ್ಷವೇ ಖಾಯಂ ನ್ಯಾಯಾಧೀಶರಾದರು. ಅವರ ಅಧಿಕಾರಾವಧಿ ಸಂದರ್ಭ ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಇಂಟರ್‌ನ್ಯಾಶನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳು ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳ ಅಧ್ಯಕ್ಷ ಮತ್ತು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
2019ರ ಜನವರಿ 18ರಂದು ನ್ಯಾಯಮೂರ್ತಿ ಖನ್ನಾ ಅವರನ್ನು ಸುಪ್ರೀಂಕೋರ್ಟ್‌ಗೆ ನೇಮಿಸಲಾಯಿತು. ಯಾವುದೇ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಕೆಲವೇ ನ್ಯಾಯಾಧೀಶರಲ್ಲಿ ಖನ್ನಾ ಅವರು ಒಬ್ಬರಾದರು. ಖನ್ನಾ ಅವರ ಒಂದು ಗಮನಾರ್ಹ ತೀರ್ಪು ಯಾವುದೆಂದರೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರಿಗೆ ಮಧ್ಯಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದು. ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಸಂಜೀವ್ ಖನ್ನಾ ಇದ್ದರು. ಜಮ್ಮು -ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಕೇಂದ್ರ ಸರ್ಕಾರದ ನಿರ್ಧಾರ ರದ್ದುಪಡಿಸುವ ನಿರ್ಧಾರವನ್ನು ಎತ್ತಿಹಿಡಿದಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com