ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ಬಾಲಕರ ಹಾಸ್ಟೆಲ್‌ಗೆ ಊಟದ ಸ್ಟೀಲ್ ತಟ್ಟೆಗಳನ್ನು ಇಡುವ ಸ್ಟೀಲ್ ರ್ಯಾಕ್ ಅನ್ನು ಭಾನುವಾರ ಸಂಜೆ ಆಶ್ರಮದ ಹಾಸ್ಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರಿಗೆ ಹಸ್ತಾಂತರಿಸಲಾಯಿತು.
ರೂ.50000/- ಮೌಲ್ಯದ ರ್ಯಾಕ್‌ನಲ್ಲಿ 120 ಊಟದ ತಟ್ಟೆಗಳನ್ನು ಇಡಬಹುದು. ಇದನ್ನು ಸ್ವೀಕರಿಸಿ ಮಾತನಾಡಿದ ಮಠದ ಅಧ್ಯಕ್ಷ ಸ್ವಾಮಿ ಜಿತ ಕಾಮಾನಂದಜಿ,”ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನೀಡಿದ ಈ ಸ್ಟೀಲ್ ರ್ಯಾಕ್ ನ ಅಗತ್ಯ ನಮ್ಮ ಹಾಸ್ಟೆಲ್‌ಗೆ ಇತ್ತು. ವಿದ್ಯಾರ್ಥಿಗಳು ಊಟದ ನಂತರ ತೊಳೆದ ತಟ್ಟೆಗಳನ್ನು ಇಡಲು ಇದು ತುಂಬಾ ಸಹಕಾರಿ. ಕಳೆದ ವರ್ಷವೂ ಶ್ರೀಶಾ ಸೊಸೈಟಿ ಹಾಸ್ಟೆಲ್ ಮಕ್ಕಳ ಬಿಸಿನೀರು ಸ್ನಾನಕ್ಕೆ ಎರಡು ಗುಜರಾತಿ ಬಾಯ್ಲರ್‌ಗಳನ್ನು ನೀಡಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಶ್ರೀಶಾ ಸೊಸೈಟಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ” ಎಂದು ಹಾರೈಸಿದರು.
https://chat.whatsapp.com/Ge11n7QCiMj5QyPvCc0H19
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಎಂ.ಭಟ್ ಮಾತನಾಡಿ, “ಶ್ರೀಶಾ ಸೊಸೈಟಿಯ ಈ ಕಾರ್ಯ ಅತ್ಯಂತ ಸ್ತುತ್ಯರ್ಹ ಮತ್ತು ರಾಜ್ಯದ ಅನೇಕ ಸಹಕಾರಿಗಳಿಗೆ ಮಾದರಿ. ಶಿಸ್ತುಬದ್ಧ ಆಡಳಿತ, ಲಾಭಾಂಶ ಗಳಿಕೆಯಲ್ಲಿ ಒಂದಂಶವನ್ನು ಸಮಾಜಮುಖಿ ಕಾರ್ಯಗಳಿಗೆ ನೀಡುತ್ತಿರುವುದು ನಮಗೆಲ್ಲಾ ಹೆಮ್ಮೆ. ಮಠದ ಸ್ವಾಮೀಜಿಯವರ ಆಶೀರ್ವಾದ, ಮಾರ್ಗದರ್ಶನ ಸದಾ ಇರಲಿ” ಎಂದರು.
ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಶುಭ ಹಾರೈಸಿದರು. ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ ಸಾಂದರ್ಭಿಕವಾಗಿ ಮಾತನಾಡಿದರು. ಹಾಸ್ಟೆಲ್ ನ ವಿದ್ಯಾರ್ಥಿಗಳು ಶಾರದಾಮಾತೆಯ ಭಾವಚಿತ್ರಕ್ಕೆ ಮಂತ್ರ ಪಠಣದೊಂದಿಗೆ ಆರತಿ ಬೆಳಗಿದರು. ಶ್ರೀಶಾ ಸೊಸೈಟಿಯ ನಿರ್ದೇಶಕರಾದ ಸುರೇಶ್ ಬೈಂದೂರ್, ವತ್ಸಲಾ ಬಾಬು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿತ್ರಾ ಡಿಸೋಜ, ಕುಸುಮಾ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com