ರಾಜ್ಯ ವಿಧಾನಸಭಾ ಚುನಾವಣೆಯ ಎಫೆಕ್ಟ್, ಡಿಸೆಂಬರ್ ಅಂತ್ಯಕ್ಕೆ ದಿನಾಂಕ ನಿಗದಿ
ಮುಂಬೈ: ಮಹಾರಾಷ್ಟ್ರದಲ್ಲಿ ಸಹಕಾರ ಸಂಘಗಳ ಚುನಾವಣಾ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಈ ಹಿಂದೆ ಅಕ್ಟೋಬರ್ 1ರಿಂದ ಚುನಾವಣಾ ಪ್ರಕ್ರಿಯೆ ನಿಗದಿಯಾಗಿದ್ದರೂ ಅದನ್ನು ಮುಂದೂಡಿ ಮುಂದಿನ ದಿನಾಂಕವನ್ನು ಡಿಸೆಂಬರ್ 31ರಿಂದ ಆರಂಭಿಸುವಂತೆ ನಿಗದಿಪಡಿಸಲಾಗಿದೆ. ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 35,000ಕ್ಕೂ ಅಧಿಕ ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಚುನಾವಣೆ ಮುಂದೂಡಲಾಗಿದೆ ಎನ್ನಲಾಗಿದೆ.
https://chat.whatsapp.com/Ge11n7QCiMj5QyPvCc0H19
ಸಾಕಷ್ಟು ವಿಳಂಬದ ನಂತರ ಮಹಾರಾಷ್ಟ್ರದ 29,443 ಕೋ ಆಪರೇಟಿವ್ ಸೊಸೈಟಿಗಳ ಚುನಾವಣೆಗೆ ಅ.1ರಿಂದ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ನಿಗದಿಪಡಿಸಲಾಗಿತ್ತು. ಆದರೆ ವಿಧಾನಸಭೆ ಚುನಾವಣೆಯ ಸಿದ್ಧತೆಗಳಿಗೆ ತೊಡಕುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮತ್ತೊಮ್ಮೆ ದಿನಾಂಕ ಮರುನಿಗದಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಅಲ್ಲಿನ ಕೋ ಆಪರೇಟಿವ್ ಸೊಸೈಟಿಗಳು ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲಿನ ಸಕ್ಕರೆ ಸಹಕಾರ ಸಂಘಗಳು, ನೂಲು ಗಿರಣಿಗಳು, ವಿವಿಧ ಗ್ರಾಮೀಣ ಮತ್ತು ನಗರ ಸಹಕಾರಿ ಸಂಘಗಳು ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಜೋಡಿಸಿಕೊಂಡಿವೆ. ಸಹಕಾರಿ ಸಂಘಗಳ ಆಡಳಿತ ಮಂಡಳಿಯಲ್ಲಿ ರಾಜಕೀಯ ಪ್ರಭಾವ ನೇರವಾಗಿರುವ ಕಾರಣ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಗೆ ತೊಂದರೆಯಾಗಬಾರದು ಎಂಬ ಕಾರಣ ಮುಂದಿಟ್ಟು ಚುನಾವಣೆ ಮುಂದೂಡಲಾಗಿದೆ.