ವಾರ್ಷಿಕ ಮಹಾಸಭೆಯಲ್ಲಿ 65% ಬೋನಸ್ ನೀಡಲು ಪ್ರಸ್ತಾಪ
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2023 _24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಣೂರು ನರಸಿಂಹ ಕಾಮತ್, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಿದರೆ ಮಾತ್ರ ಮುಂದಿನ ವರ್ಷಗಳಲ್ಲಿ ಹೈನುಗಾರಿಕೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಶು ಆಹಾರದ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮೇವು ಹಾಗೂ ರಸಮೇವಿನ ಉತ್ಪಾದನೆ ಮತ್ತು ಬಳಕೆಯಿಂದ ಹಿಂಡಿಯ ಖರ್ಚು ಕಡಿಮೆಯಾಗಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ಒಕ್ಕೂಟದ ಪ್ರೋತ್ಸಾಹಕ ಯೋಜನೆಗಳಾದ ಮಿಶ್ರ ತಳಿ ಕರು ಯೋಜನೆ, ಸಾಮೂಹಿಕ ರಾಸು ವಿಮಾ ಯೋಜನೆ, ಮಿನಿ ಡೈರಿ ಮತ್ತು ವಾಣಿಜ್ಯ ಡೈರಿ ಘಟಕ, ಹಸಿರು ಮೇವಿನ ತಾಕು ಅಭಿವೃದ್ಧಿ ಮೊದಲಾದ ಯೋಜನೆಗಳ ಅನುಷ್ಠಾನದ ಮೂಲಕ ಗರಿಷ್ಠ ಲಾಭವನ್ನು ಪಡೆಯಬೇಕೆಂದು ಕರೆ ನೀಡಿದರು.
https://chat.whatsapp.com/Ge11n7QCiMj5QyPvCc0H19
ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ಸಂಘದ 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡಿಸಿ, ಲೆಕ್ಕಪರಿಶೋಧನೆಯಲ್ಲಿ ಹಲವಾರು ವರ್ಷಗಳಿಂದ ‘ಎ’ ಶ್ರೇಯಾಂಕ ಪಡೆಯುತ್ತಿದ್ದು, ಸದಸ್ಯರಿಗೆ 15 % ಡಿವಿಡೆಂಡ್ ಮತ್ತು 65% ಬೋನಸ್ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದ ವತಿಯಿಂದ ರೈತರಿಗೆ ಸಿಗುವ ಹಲವಾರು ಸೌಲಭ್ಯಗಳ ವಿವರವನ್ನು ನೀಡಿದರು.
ನಿರ್ದೇಶಕರಾದ ಜಯ ಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು. ಸೋಮಶೇಖರ್ 2024_25 ನೇ ಸಾಲಿನ ಕಾರ್ಯ ಯೋಜನೆಗಳ ವಿವರ ನೀಡಿದರು. ರಾಯಲ್ ನೊರೋನ್ಹಾ ಆಡಳಿತ ಮಂಡಳಿ ಸದಸ್ಯರ ಪದಾಧಿಕಾರಿಗಳ ಮತ್ತು ನೌಕರರ ನೀತಿ ಸಂಹಿತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಸಂತೋಷ ಶೆಟ್ಟಿ ಅಂದಾಜು ಆಯವ್ಯಯ ಮಂಡಿಸಿದರು. ಸಂಘಕ್ಕೆ ಗರಿಷ್ಠ ಹಾಲು ಪೂರೈಸಿದ ಮಾಲತಿ, ರಾಯಲ್ , ಡಾ.ನಾಗರತ್ನ, ಶ್ರೀಧರ ಸಮಗಾರ, ರಘುರಾಮ್ ಪೂಜಾರಿ, ಪ್ರೇಮಾ ಶೆಟ್ಟಿ, ಸೋಮಶೇಖರ ರಾವ್, ಲಿಯೋನಿಲ್ಲಾ ಡಿಸೋಜ, ಶಾಮಲಾ, ಜಾನಪ್ಪ ಮೂಲ್ಯ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಪ್ರಜ್ಞಾ, ಅಮೂಲ್ಯ, ಲಕ್ಷ್ಮಿತಾ ಡಿ.ಕುಲಾಲ್, ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಅನನ್ಯ ಪೂಜಾರಿ, ನಿಖಿಲ್ ಡಿಸೋಸ, ಆನಿ ಅಮೃತ ಡಿಸೋಜ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿದ ಸೈಮನ್ ಪಿಂಟೋ, ಜಯಾನಂದ ಮೂಲ್ಯ, ವಾಸು ಶೆಟ್ಟಿಯವರಿಗೆ ಗೌರವ ಪುರಸ್ಕಾರ ನೀಡಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಕೊರಗ ಶೆಟ್ಟಿ, ಮಾಜಿ ಅಧ್ಯಕ್ಷ ಶ್ರೀಧರ ಸಮಗಾರ, ನಿರ್ದೇಶಕರಾದ ಜಯ ಮೂಲ್ಯ, ವಿಶ್ವನಾಥ ಶೆಟ್ಟಿಗಾರ್ , ಸಂಜೀವಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಯಶೋಧಾ ಆರ್. ಸುವರ್ಣ ಸ್ವಾಗತಿಸಿ, ನಿರ್ದೇಶಕ ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ಪ್ರಮೀಳಾ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com