ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ತಥಾಸ್ತು ಯೋಜನೆ ಸೆ.14ರಂದು ಹಸ್ತಾಂತರ
ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕಿಗೆ ಬದುಕಿಗೊಂದು ಸೂರು ಯೋಜನೆ
ಉಡುಪಿ: ಠೇವಣಿ ಸಂಗ್ರಹ, ಸಾಲ ವಿತರಣೆ ಇವೇ ಮೊದಲಾದ ಆರ್ಥಿಕ ವಹಿವಾಟುಗಳಲ್ಲೇ ವ್ಯಸ್ತವಾಗುತ್ತಿರುವ ಕೋಆಪರೇಟಿವ್ ಸೊಸೈಟಿಗಳು ವಿಭಿನ್ನ ಯೋಜನೆ, ಯೋಚನೆಗಳ ಮೂಲಕ ಮಾನವೀಯ ಕಾರ್ಯವನ್ನೂ ಮಾಡಬಲ್ಲವು ಎಂಬುದಕ್ಕೆ ಉಡುಪಿ ಜಿಲ್ಲೆಯ ಕೋಡಿ ಕನ್ಯಾಣದ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉತ್ತಮ ನಿದರ್ಶನ ನೀಡಿದೆ. ತಮ್ಮ ಸಂಸ್ಥೆಯ ಬಡ ಗ್ರಾಹಕಿಯೊಬ್ಬರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳನ್ನು ಸೇರಿಸಿಕೊಂಡು ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ.
ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತನ್ನ ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರುವಾಸಿಯಾಗಿದೆ. ಜನಪರ ಕಾರ್ಯಚಟುವಟಿಕೆ, ಸಮಾಜಮುಖಿ ಕೈಂಕರ್ಯದಲ್ಲಿ ಗ್ರಾಹಕರ ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸಿದೆ. ಇದೇ ಕಾರ್ಯದಲ್ಲಿ ಮುಂದುವರಿದು ಸಂಸ್ಥೆಯ ಗ್ರಾಹಕಿ ಇಳಿ ವಯಸ್ಸಿನ ಭವಾನಿ ಜಿ.ನಾಯ್ಕ್ ಅವರ ಮನೆ ಸೋರುತ್ತಿರುವುದನ್ನು ಮನಗಂಡು ಅವರ ಮನೆಗೆ ಭೇಟಿ ನೀಡಿದ ಆಡಳಿತ ಮಂಡಳಿ ಪರಿಶೀಲಿಸಿತು. ಈ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ಕೂಲಂಕಶವಾಗಿ ಪರಿಶೀಲಿಸಿ ಗೃಹ ನಿರ್ಮಾಣ ಮಾಡಿಕೊಡುವ ಸಂಕಲ್ಪ ಮಾಡಲಾಯಿತು. ಭವಾನಿ ಜಿ.ನಾಯಕ್ ಅವರಿಗೆ ಮನೆ ನಿರ್ಮಾಣದ ಬಗ್ಗೆ ಸೊಸೈಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಯೋಜನೆ ರೂಪಿಸಿ ಕೆಲಸಕ್ಕೆ ಮುಂದಾದರು. ಇದಕ್ಕಾಗಿ ತಥಾಸ್ತು ಎಂಬ ಹೆಸರಿನಲ್ಲಿ ಸ್ಥಳೀಯ ಹಲವಾರು ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವು ಪಡೆದು ಕ್ರಿಕೆಟ್ ಟೂರ್ನಿ ಆಯೋಜಿಸಿ ಒಂದಷ್ಟು ಧನ ಸಂಗ್ರಹ ಮಾಡಿದರು. ಬಳಿಕ ಅದೃಷ್ಟ ಯೋಜನೆಯ ಲಕ್ಕಿಡಿಪ್ ಮೂಲಕವೂ ಒಂದಷ್ಟು ಆರ್ಥಿಕ ನೆರವು ಕ್ರೋಡೀಕರಿಸಿದರು. ಈ ಇಡೀ ಕೆಲಸದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಅವರು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದರು.
ಸೊಸೈಟಿಯ ಈ ಕಾರ್ಯಕ್ಕೆ ಊರಿನ ಸಂಘ ಸಂಸ್ಥೆಗಳು ಸಾಥ್ ನೀಡಿದವು. ಸುಮಾರು 8-9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದ್ದು ಸುಮಾರು 4-5 ಲಕ್ಷ ರೂ.ನಷ್ಟು ವೆಚ್ಚವನ್ನು ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರೇ ಭರಿಸಿದ್ದಾರೆ. ಸಹಕಾರಿಯ ಲಾಭಾಂಶದಲ್ಲೂ ಒಂದಷ್ಟು ಕೊಡುಗೆ ಭವಾನಿ ಜಿ.ನಾಯಕ್ ಅವರ ಮನೆಗೆ ತೆಗೆದಿರಿಸಲಾಯಿತು. ನೋಡನೋಡುತಿದ್ದಂತೆ ಭವಾನಿ ಜಿ.ನಾಯಕ್ ಅವರಿಗೆ ಸುಂದರವಾದ ಮನೆ ನಿರ್ಮಾಣವಾಗಿದ್ದು ಇದೀಗ ತಮ್ಮ ಬದುಕಿನ ಇಳಿ ವಯಸ್ಸಿನಲ್ಲಿ ಅವರು ಭದ್ರವಾದ ಸೂರಿನಲ್ಲಿ ತಮ್ಮ ಸೊಸೆಯಂದಿರ ಜೊತೆಗೆ ನೆಮ್ಮದಿಯ ಜೀವನ ನಡೆಸಬಹುದು.
ತಮ್ಮ ಸಂಸ್ಥೆಯ ಗ್ರಾಹಕಿಗೆ ಭದ್ರವಾದ ಸೂರು ಕಲ್ಪಿಸಿಕೊಟ್ಟಿರುವ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಾನವೀಯ ಕೈಂಕರ್ಯಕ್ಕೆ, ಮಾದರಿ ಕಾರ್ಯಕ್ಕೆ ಎಲ್ಲ ಕಡೆಯಿಂದಲೂ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.
ಸೆ.14ರಂದು ಸಂಜೆ ಭವಾನಿ ಜಿ.ನಾಯಕ್ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಉದ್ಯಮಿ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಜಿ.ಕುಂದರ್ ಮನೆ ಹಸ್ತಾಂತರಿಸಲಿದ್ದಾರೆ. ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸುವರು. ಉದ್ಯಮಿ ಶಿವ ಎಸ್.ಕರ್ಕೇರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್ ಎಸ್.ಕೆ, ಕೋಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಗೀತಾ ಗೋಪಾಲ ಖಾರ್ವಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಕೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಉದ್ಯಮಿ ಅಂತೋನಿ ಡಿಸೋಜ ಕೋಡಿ ಕನ್ಯಾಣ ಮೊದಲಾದವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಮತ್ತು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com