ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಘೋಷಣೆ
ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್ನಲ್ಲಿ ಭಾನುವಾರ ಜರುಗಿತು.
ಸ೦ಘವು 31-03-2024ಕ್ಕೆ ಅ೦ತ್ಯವಾದ 2023-24ನೇ ಸಾಲಿನಲ್ಲಿ ರೂ.12.01 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆ೦ಡ್ ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.
ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರು 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಮಾತನಾಡಿ, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ರೂ. 151 ಕೋಟಿ ವೃದ್ಧಿಯನ್ನು ದಾಖಲಿಸಿ, 533 ಕೋಟಿ ಠೇವಣಾತಿ, ರೂ.453 ಕೋಟಿ ಸಾಲ, ರೂ.986 ಕೋಟಿ ಮೀರಿದ ಒಟ್ಟು ವ್ಯವಹಾರ, ರೂ.12.01 ಕೋಟಿ ನಿವ್ವಳ ಲಾಭ ಹಾಗೂ ರೂ. 3974 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ. ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. 0.07ಗೆ ಸೀಮಿತವಾಗಿದ್ದು, ಕಳೆದ 17 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ ಎಂದು ಹೇಳಿದರು.
ಸಂಘದ ಕೇಂದ್ರ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು ಮಾರ್ಚ್ 2025ರೊಳಗೆ ಪೂರ್ಣ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಹೊಸ ಶಾಖೆಗಳನ್ನು ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಪ್ರಸ್ತುತ ರೂ.534 ಕೋಟಿ ಠೇವಣಿ, ರೂ.474 ಕೋಟಿ ಹೊರಬಾಕಿ ಸಾಲದೊಂದಿಗೆ ಒಟ್ಟು ವ್ಯವಹಾರ ರೂ.1008 ಕೋಟಿಯನ್ನು ಮೀರಿದ್ದು ತನ್ನ “ವಿಶನ್ 2025”ರ ರೂ.1000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಬಹಳ ಮುಂಚಿತವಾಗಿಯೇ ಅಂದರೆ 2024-25ರ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲೇ ಸಾಧಿಸಿರುವುದು ಹೆಮ್ಮೆಯ ವಿಷಯ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸ೦ಘದ ಉಪಾಧ್ಯಕ್ಷೆ ಲಕ್ಷ್ಮೀ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರಾದ ಎ.ರತ್ನಕಾ೦ತಿ ಶೆಟ್ಟಿ, ಕೆ.ಸೀತಾರಾಮ ರೈ ಸವಣೂರು, ಡಾ.ಕೆ.ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್.ಅಡ್ಯ೦ತಾಯ, ವಿಠಲ ಪಿ.ಶೆಟ್ಟಿ, ಎಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ.ದಿವಾಕರ ರೈ, ರವೀ೦ದ್ರನಾಥ ಜಿ.ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ| ಎ೦.ಸುಧಾಕರ ಶೆಟ್ಟಿ ಮತ್ತು ಅರಿಯಡ್ಕ ಚಿಕ್ಕಪ್ಪ ನಾಯಕ್ ಉಪಸ್ಥಿತರಿದ್ದರು.
ಮಹಾಪ್ರಬ೦ಧಕ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು. 2023-24ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಎಂ.ರಾಮಯ ಶೆಟ್ಟಿ ವ೦ದಿಸಿದರು. ಸಿಬ್ಬ೦ದಿ ಕಾವ್ಯಶ್ರೀ ಪ್ರಾರ್ಥಿಸಿದರು, ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com