ವಿಷನ್ ಸಹಕಾರ್ ಸೇ ಸಮೃದ್ಧಿ ಕಾರ್ಯಕ್ರಮಕ್ಕೆ ಪೂರಕವಾಗಿ ಕ್ರಮ
ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್ ಶಾ ಮಾಹಿತಿ
ನವದೆಹಲಿ: ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರದ ಸಹಕಾರದಿಂದ ಸಮೃದ್ಧಿ ವಿಷನ್‌ಗೆ ಪೂರಕವಾಗಿ ಈ ಕ್ರಮಗಳು ಜಾರಿಯಾಗಲಿವೆ. ಸಹಕಾರ ಸಂಘಗಳ ಹಲವಾರು ಕಾರ್ಯಚಟುವಟಿಕೆಗಳಿಗೆ ತೆರಿಗೆ ವಿನಾಯಿತಿ, ನಗದು ವಹಿವಾಟಿನಲ್ಲಿ ಟಿಡಿಎಸ್ ವಿಧಿಸುವಲ್ಲಿನ ಮಿತಿಯಲ್ಲಿ ಹೆಚ್ಚಳ ಇತ್ಯಾದಿ ಉಪಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಹೇಳಿದರು.
ಲೋಕಸಭೆಯಲ್ಲಿ ಮಾಹಿತಿ ನೀಡಿದ ಸಚಿವ ಅಮಿತ್ ಶಾ, ಸಹಕಾರ ಸಂಘಗಳ ಆದಾಯದ ಮೇಲಿನ ಸರ್ಚಾರ್ಜ್‌ನಲ್ಲಿ ಕಡಿತ ಮಾಡುವುದರ ಸುಳಿವು ನೀಡಿದರು. ಸರ್ಚಾರ್ಜ್ ರೂ. 1 ಕೋಟಿ ಮತ್ತು ರೂ. 10 ಕೋಟಿ ನಡುವಿನ ಆದಾಯಕ್ಕೆ 12% ರಿಂದ 7% ಕ್ಕೆ ಇಳಿಕೆಯಾಗಿದೆ. ಈ ಕಡಿತವು ಸಹಕಾರಿ ಸಂಘಗಳು ಮತ್ತು ಅದರ ಸದಸ್ಯರ, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಸಮುದಾಯಗಳ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಘೋಷಿಸಿದರು. ಇದರ ಜೊತೆಗೆ ಸಹಕಾರಿ ಸಂಸ್ಥೆಗಳಿಗೆ ಪರ್ಯಾಯ ಕನಿಷ್ಠ ತೆರಿಗೆ ದರವನ್ನು 18.5% ರಿಂದ 15% ಕ್ಕೆ ಇಳಿಸಲಾಗಿದೆ, ಕಂಪನಿಗಳಿಗೆ ಅನ್ವಯಿಸುವ ದರದೊಂದಿಗೆ ಅದನ್ನು ಜೋಡಿಸಲಾಗಿದೆ ಎಂದೂ ಅಮಿತ್ ಶಾ ಮಾಹಿತಿ ನೀಡಿದರು.
https://chat.whatsapp.com/Ge11n7QCiMj5QyPvCc0H19
2 ಲಕ್ಷಕ್ಕಿಂತ ಹೆಚ್ಚಿನ ನಗದು ರಶೀದಿಗಳನ್ನು ಮಿತಿಗೊಳಿಸುವ ಸೆಕ್ಷನ್ 269ST ಅನ್ವಯವನ್ನೂ ಸರ್ಕಾರ ಸ್ವಲ್ಪಮಟ್ಟಿಗೆ ಬದಲಿಸಿದೆ. ಈ ಹಿಂದೆ, ಹಾಲು ಉತ್ಪಾದಕ ಸಹಕಾರ ಸಂಘಗಳು ಬ್ಯಾಂಕ್‌ನ ರಜಾದಿನಗಳ ನಗದನ್ನು ಮರುದಿನ ಬ್ಯಾಂಕಿಗೆ ಪಾವತಿಸಿದಾಗ ೨ ಲಕ್ಷಕ್ಕಿಂತ ಜಾಸ್ತಿ ಇದ್ದರೆ ದಂಡ ತೆರಬೇಕಾಗಿತ್ತು. ಏಕೆಂದರೆ ಆದಾಯ ತೆರಿಗೆ ಇಲಾಖೆ ಈ ವಹಿವಾಟುಗಳನ್ನು ಒಂದೇ ದಿನಕ್ಕೆ ಪರಿಗಣಿಸುತ್ತಿತ್ತು. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಇತ್ತೀಚೆಗೆ ನೀಡಿರುವ ಹೇಳಿಕೆಯು ಈ ಸೊಸೈಟಿಗಳಿಗೆ ಪೆನಾಲ್ಟಿ ವಿಧಿಸದೇ ಇಂತಹ ನಗದು ರಸೀದಿಗಳನ್ನು ಒಟ್ಟುಗೂಡಿಸಿ ನೀಡಲು ಅನುಮತಿ ನೀಡಲಿದೆ. ಮಾರ್ಚ್ 31, 2024ರ ಮೊದಲು ಸ್ಥಾಪನೆಯಾದ ಸಹಕಾರ ಸಂಘಗಳು, ಹೊಸ ಉತ್ಪಾದನಾ ಕಂಪನಿಗಳಂತೆಯೇ 15% ಕಡಿಮೆ ತೆರಿಗೆ ದರದಿಂದ ಪ್ರಯೋಜನ ಪಡೆಯಲಿವೆ. ಈ ರಿಯಾಯಿತಿ ಉತ್ಪಾದನಾ ಸಹಕಾರಿಗಳ ಸ್ಥಾಪನೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694