-
ಡೈರಿ ವಲಯದಲ್ಲಿ ಅತಿ ಹೆಚ್ಚು ಕೋ ಆಪರೇಟಿವ್ ಸೊಸೈಟಿಗಳು
-
ಮಹಾರಾಷ್ಟ್ರ, ಗುಜರಾತ್‌ನಲ್ಲಿಗರಿಷ್ಠ ಸಹಕಾರಿ ಸಂಸ್ಥೆಗಳು
-
ರಾಜ್ಯಸಭೆಯಲ್ಲಿ ಸಹಕಾರಿ ಸಚಿವ ಅಮಿತ್ ಶಾ ಮಾಹಿತಿ
ನವದೆಹಲಿ: ಕೇಂದ್ರದ ಸಹಕಾರ ಸಚಿವಾಲಯ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸಮಗ್ರ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (NCD) ಅನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಡೈರಿ, ಮಹಿಳಾ ಕಲ್ಯಾಣ ಮತ್ತು ಬುಡಕಟ್ಟು ಎಸ್‌ಸಿ/ಎಸ್‌ಟಿ ಸಹಕಾರಿ ಸೇರಿದಂತೆ ವಿವಿಧ ವಲಯಗಳ ಡೇಟಾಗಳ ಮಾಹಿತಿಗಳಿವೆ. ಎನ್‌ಸಿಡಿ ಪೋರ್ಟಲ್ ಪ್ರಕಾರ, ದೇಶದಲ್ಲಿ ಒಟ್ಟು 8,09,303 ಸಹಕಾರ ಸಂಘಗಳಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ವೇಳೆ ಮಾತನಾಡಿದ ಸಹಕಾರ ಸಚಿವ ಅಮಿತ್ ಶಾ, ರಾಜ್ಯವಾರು ಮತ್ತು ವಲಯವಾರು ಸಹಕಾರಿಗಳ ವಿವರಗಳು ರಾಷ್ಟ್ರವ್ಯಾಪಿ ಸಹಕಾರಿ ಮೂಲಸೌಕರ್ಯವನ್ನು ಬಲಪಡಿಸಲು ಕಾರಣವಾಗುತ್ತದೆ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ 2,22,324, ಗುಜರಾತ್‌ನಲ್ಲಿ 82,143, ತೆಲಂಗಾಣದಲ್ಲಿ 60,619, ಮಧ್ಯಪ್ರದೇಶ 53,134, ಕರ್ನಾಟಕ 45,461, ಉತ್ತರಪ್ರದೇಶ 44,579, ಹರ್ಯಾಣ 32,860, ಬಿಹಾರ 26,655, ಪಂಜಾಬ್ 19,074, ಆಂಧ್ರಪ್ರದೇಶ 17,675, ಅಸ್ಸಾಮ್ 11,204 ಸೊಸೈಟಿಗಳನ್ನು ಹೊಂದಿವೆ.
ಡೈರಿ ವಲಯದಲ್ಲಿ 1,44,047 ಸೊಸೈಟಿಗಳಿವೆ. ಹೌಸಿಂಗ್ 1,92,297, ಕ್ರೆಡಿಟ್ 80,376, ಕಾರ್ಮಿಕ ವಲಯದ 44,985 ಸೊಸೈಟಿಗಳಿವೆ. ಕೃಷಿ ಸಂಬಂಧಿತ 27,233, ಮೀನುಗಾರಿಕೆ 25,909, ಮಹಿಳಾ ಕಲ್ಯಾಣ ಸಹಕಾರಿ 25,078 ಸೊಸೈಟಿಗಳಿವೆ.
ಸಹಕಾರಿ ಸಂಘಗಳಿಗೆ ನೆರವಾಗಲು ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪ್ಯಾಕ್ಸ್)ಗಳನ್ನು ಗಣಕೀಕರಣಗೊಳಿಸಲು ಮುಂದಾಗಿದೆ. ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 62,009 ಪ್ಯಾಕ್ಸ್‌ಗಳನ್ನು ERP ಆಧಾರಿತ ರಾಷ್ಟ್ರೀಯ ಸಾಫ್ಟ್‌ವೇರ್‌ನಡಿ ಏಕೀಕೃತಗೊಳಿಸಲು 2,516 ಕೋಟಿ ರೂ. ಮೀಸಲಿಡಲಾಗಿದೆ.
ಬಜೆಟ್‌ನಲ್ಲಿ ಘೋಷಿಸಿರುವ ಮತ್ತೊಂದು ಕ್ರಮ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಗಣಕೀಕರಣ. ಈ ಮೂಲಕ 1,851 ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ಹಾಕಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೆ ರಾಷ್ಟ್ರೀಯ ಮಟ್ಟದ ಸಾಫ್ಟ್‌ವೇರ್‌ಗಳನ್ನು ಒದಗಿಸಿ ಅವುಗಳಿಗೆ ತರಬೇತಿ ನೀಡುವ, ಡಿಜಿಟಲ್ ಸಪೋರ್ಟ್ ಮಾಡುವ ಜವಾಬ್ದಾರಿಯನ್ನು ನಬಾರ್ಡ್‌ಗೆ ವಹಿಸಲಾಗಿದೆ. ಇದಕ್ಕೆ 10 ರಾಜ್ಯಗಳಿಂದ ಪ್ರಸ್ತಾವನೆ ಬಂದಿದ್ದು, ಕೇಂದ್ರ ಸರ್ಕಾರ 4.26 ಕೋಟಿ ರೂ. ಅನುದಾನ ನೀಡಿದೆ.