ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಲಹೆ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ. ಜಿಲ್ಲಾ ಸಹಕಾರ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಉಪವಿಭಾಗದ ವಿವಿಧ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ ಶಿಬಿರ ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ನಡೆಯಿತು.
ತರಬೇತಿ ಶಿಬಿರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲಕಾಲಕ್ಕೆ ಸಹಕಾರಿ ಕಾನೂನಿನಲ್ಲಿ ತಿದ್ದುಪಡಿಯ ಆದಾರದ ಮೇಲೆ ಸಹಕಾರ ಸಂಘಗಳು ನಿಯಮಾನುಸಾರ ಚುನಾವಣೆಯನ್ನು ಕ್ರಮಬದ್ಧವಾಗಿ ನಡೆಸಲು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸದ್ಯ ಸಹಕಾರ ಸಂಘಗಳ ನಿಯಮ 13ಡಿ ಅನ್ವಯ 195 ದಿನಗಳ ಮುಂಚೆ ಅನರ್ಹ ಸದಸ್ಯರಿಗೆ ನೋಟಿಸ್ ನೀಡಿ ಚುನಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಸಲಹೆ ನೀಡಿದರು.
ದ.ಕ. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ರಾಜಶೇಖರ ಜೈನ್ ಮಾತನಾಡಿ, ಇಂದು ವಿಶೇಷವಾಗಿ ಚುನಾವಣೆ ತರಬೇತಿ ಜರುಗಿಸಿದ್ದು ಹೊಸ ಆಡಳಿತ ಮಂಡಳಿ ರಚಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಕಾಯ್ದೆ ಮತ್ತು ನಿಯಮಾನುಸಾರ ಚುನಾವಣೆಯನ್ನು ಪಾರದರ್ಶಕವಾಗಿ ಜರುಗಿಸುವುದಲ್ಲಿ ಮುಖ್ಯ ಕಾರ್ಯನಿರ್ವಾಹಕರ ಪಾತ್ರ ಮುಖ್ಯವಾಗಿದೆ ಎಂದರು.
ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಕ್ಷೇತ್ರವಾರು ಸಹಕಾರ ಸಂಘಗಳಿಗೆ ತರಬೇತಿ ನೀಡುತಿದ್ದು ಅದರಂತೆ ಇಂದು ಚುನಾವಣೆ ಪ್ರಕ್ರಿಯೆ ನಡೆಸಿ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಸದಸ್ಯರ ಚುನಾವಣೆ ನಡೆಸಬೇಕಾಗಿದೆ. ಇದಕ್ಕೆ ಪೂರಕವಾಗಿ ಯೂನಿಯನ್ ಮೂಲಕ ತರಬೇತಿ ಏರ್ಪಡಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧೀಕ್ಷಕ ವಿಲಾಸ್, ಸಹಕಾರ ಇಲಾಖೆಯ ಸಿಡಿಒ ಶಿವಲಿಂಗಯ್ಯ ಚುನಾವಣೆ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ ಸ್ವಾಗತಿಸಿದರು, ಯೂನಿಯನ್ ಸಿಇಒ ಎಸ್.ವಿ. ಹಿರೇಮಠ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: editor@sahakaraspandana.in, sahakaraspandana@gmail.com
ಮಾಹಿತಿಗೆ: 9901319694.