ತಾ:11-10-2023,ಬೆಂಗಳೂರು:
ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ಸಲುವಾಗಿ ಟೆಲಿಕಮ್ಯುನಿಕೇಶನ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವು, ವಿಶಿಷ್ಟವಾದ ಧ್ವನಿ ಮತ್ತು ಕಂಪನ ಮೂಲಕ ಮುನ್ನೆಚ್ಚರಿಕೆ ನೀಡಲು ಮುಂದಾಗಿದೆ. ಅದರಂತೆ ರಾಜ್ಯದಲ್ಲಿ ಇಂದು ಅಂದರೆ ಅ. 12ರಂದು ಸದ್ರಿ ವ್ಯವಸ್ಥೆಯ ಪರೀಕ್ಷೆ ನಡೆಸಲಿದೆ.
ಈಗಾಗಲೇ ಮೊಬೈಲ್ ಬಳಕೆದಾರರಿಗೆ ಈ ಕುರಿತಾದ ಸಂದೇಶಗಳು ರವಾನೆಯಾಗಿದೆ. ಫೋನ್‌ನಲ್ಲಿ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ದ ಹಾಗೂ ಸಂದೇಶ ಫ್ಲಾಶ್ ಆಗಲಿದೆ. ಬಳಕೆದಾರರು ಸರಿ ಎಂದು ಒತ್ತುವವರೆಗೂ ಈ ಬೀಪ್ ಇರಲಿದೆ.
ಇದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಿದ ಸ್ಯಾಂಪಲ್ ಪರೀಕ್ಷಾ ಸಂದೇಶವಾಗಿದ್ದು, ಇದನ್ನು ನಿರ್ಲಕ್ಷಿಸಬಹುದಾಗಿದೆ ಮತ್ತು ಬಳಕೆದಾರರು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಯನ್ನು ಹಾಗೂ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಭೂಕಂಪ, ಸುನಾಮಿ, ಅಥವಾ ಯಾವುದೇ ಇನ್ನಿತರ ಅನಾಹುತಗಳು ನಡೆಯಬಹುದಾದ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಸನ್ನದ್ಧರಾಗಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.