ನೂತನ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್’ ಕೋರ್ಸ್: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಘೋಷಣೆ
ಬೆಂಗಳೂರು: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಕೌಶಲ್ಯಯುತ ಹಾಗೂ ವೃತ್ತಿಪರ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ (DCA) ಎಂಬ ಆರು ತಿಂಗಳ ಅವಧಿಯ ನೂತನ ಡಿಪ್ಲೊಮಾ ಕೋರ್ಸ್ ಆರಂಭಿಸುವುದಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಘೋಷಿಸಿದೆ.
https://chat.whatsapp.com/FCEnlTkAKCC0MGPhXtX4i4
ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ (DCA) ಡಿಪ್ಲೊಮಾ ಕೋರ್ಸ್ ಆರಂಭಿಸುವ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು, ರಾಜ್ಯದ ಯುವ ಜನತೆಗೆ ಈ ಕೋರ್ಸ್ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸಹಕಾರ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಆರು ತಿಂಗಳ ಸುದೀರ್ಘ ಕೋರ್ಸ್‌ನಲ್ಲಿ ಸಹಕಾರ ಕಾಯ್ದೆ ಮತ್ತು ನಿಯಮಗಳು, ಅಕೌಂಟಿಂಗ್ ಆ್ಯಂಡ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್, ಕೋ-ಆಪರೇಟಿವ್ ಆಡಿಟಿಂಗ್, ಕೋ-ಆಪರೇಟಿವ್ ಇಕೋ-ಸಿಸ್ಟಂ ಹಾಗೂ ಟ್ಯಾಲಿ ಸೇರಿದಂತೆ ಇತ್ತೀಚಿನ ಆಧುನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ ತರಗತಿ ಬೋಧನೆ, ಕೇಸ್ ಸ್ಟಡೀಸ್, ಫೀಲ್ಡ್ ಸ್ಟಡೀಸ್ ಮತ್ತು ಪ್ರಾಯೋಗಿಕ ಲೆಕ್ಕಪರಿಶೋಧನಾ ಕೆಲಸದ ಅನುಭವವನ್ನು ಈ ಕೋರ್ಸ್ ಒಳಗೊಂಡಿರಲಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎಂ ಅಥವಾ ಯಾವುದೇ ಪದವಿಯಲ್ಲಿ ಅಕೌಂಟೆನ್ಸಿಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರಲಿದ್ದಾರೆ. ಈ ಕೋರ್ಸ್‌ನ ಪ್ರವೇಶ ಶುಲ್ಕವು ಸಾಮಾನ್ಯ ಹಾಗೂ ಇತರೆ ಅಭ್ಯರ್ಥಿಗಳಿಗೆ 10 ಸಾವಿರ ರೂಪಾಯಿಗಳಾಗಿದ್ದು, ಬಿಪಿಎಲ್, ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.

ವಾರ್ಷಿಕ 500 ಲೆಕ್ಕಪರಿಶೋಧಕರನ್ನು ಸೃಷ್ಟಿಸುವ ಗುರಿ:
ಸಹಕಾರ ಸಂಘಗಳ ರಚನೆ, ಆಡಳಿತ, ಹಣಕಾಸು ನಿರ್ವಹಣೆ ಹಾಗೂ ಲೆಕ್ಕಪರಿಶೋಧನಾ ವಿಧಾನಗಳನ್ನು ಬಲಪಡಿಸುವುದು ಈ ಕೋರ್ಸ್‌ನ ಪ್ರಮುಖ ಆಶಯವಾಗಿದೆ. ಕೌಶಲ್ಯಯುತ ಮತ್ತು ಸಮರ್ಥ ಲೆಕ್ಕಪರಿಶೋಧಕರನ್ನು ತಯಾರಿಸುವುದರ ಜೊತೆಗೆ, ಸಂಸ್ಥೆಗಳ ವ್ಯವಹಾರಿಕ ಲೋಪದೋಷಗಳನ್ನು ತಡೆಗಟ್ಟಿ ಕಾನೂನುಬದ್ಧ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈ ತರಬೇತಿಯು ಸಹಕಾರಿಯಾಗಲಿದೆ. ಕೋರ್ಸ್ ಪಡೆದವರಿಗೆ ಅಧಿಕೃತ ಮಾನ್ಯತೆ ಪತ್ರವನ್ನು ಇಲಾಖೆಯಿಂದ ನೀಡಲಾಗುವುದು. ಅವರು ಮಾಡುವ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ವರದಿಯನ್ನು ಸಹಕಾರ ಇಲಾಖೆಯವರು ಅಧಿಕಾರಿಗಳು ಪರಿಶೀಲಿಸಿ ಅಧಿಕೃತ ಮಾನ್ಯತೆ ನೀಡಲಿದ್ದಾರೆ. ವಾರ್ಷಿಕವಾಗಿ 500 ಜನ ಲೆಕ್ಕಪರಿಶೋಧಕರನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಅರ್ಜಿಗಳನ್ನು ಗಮನಿಸಿ ಮುಂದಿನ ಯೋಜನೆ ರೂಪಿಸಲಿದ್ದೇವೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಯು ಅಕ್ಟೋಬರ್ 30ರಿಂದ ಆರಂಭವಾಗಲಿದ್ದು, ಪ್ರಕಟಣೆ ಹೊರಬಂದ ದಿನಾಂಕದಿಂದ 15 ದಿನಗಳ ಒಳಗಾಗಿ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು. ರಾಜ್ಯದ ಎಂಟು ಪ್ರಮುಖ ಸಹಕಾರ ತರಬೇತಿ ಕೇಂದ್ರಗಳಾದ ಬೆಂಗಳೂರು, ಧಾರವಾಡ, ಮೈಸೂರು, ಮಡಿಕೇರಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿಗಳಲ್ಲಿ ಈ ಕೋರ್ಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕೃತ ವೆಬ್‌ಸೈಟ್ https://dca.kscfl.in ಅಥವಾ ಬೆಂಗಳೂರಿನ ಕಚೇರಿಯನ್ನು ಸಂಪರ್ಕಿಸಬಹುದು.










